ಬೆಂಗಳೂರು: ಸಂಪುಟಕ್ಕೆ ರಮೇಶ್ ಜಾರಕಿಹೊಳಿ ಗುಡ್‌ಬೈ ಹೇಳಲು ಕಾರಣವಾದ ವಿವಾದಿತ ಸಿಡಿ ರಹಸ್ಯ ಬೆನ್ನತ್ತಿರುವ ಎಸ್‌ಐಟಿ ಫೊಲೀಸರು ಮಹತ್ವದ ಸಂಗತಿಯನ್ನು ಬೇಧಿಸಿದ್ದಾರೆ.
ಐಜಿಪಿ ಸೌಮೆಂದು ಮುಖರ್ಜಿ ನೇತೃತ್ವದ ವಿಶೇಷ ತನಿಖಾ ತಂಡ ಹಲವು ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಗುರಿಪಡಿಸಿದೆ ಎನ್ನಲಾಗಿದೆ.
ಈ ಸಿಡಿ ವಿವಾದವು ರಾಜಕೀಯ ನಾಯಕರ ಪಿತೂರಿ ಎಂದು ಆರೋಪಿಸಿರುವ ರಮೇಶ್ ಜಾರಕಿಹೊಳಿ, ಈ ಸಂಬಂಧ ಉನ್ನತಮಟ್ಟದ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಆ ಆಗ್ರಹದ ಸುಳಿವನ್ನೇ ಆಧರಿಸಿ ಸೌಮೆಂದು ಸಾರಥ್ಯದ ಎಸ್ಐಟಿ ತಂಡ ಅಪರಾಧ ಬೇಧಿಸುವ ಕಾರ್ಯಾಚರಣೆಗಿಳಿದಿದೆ.
ಈ ನಡುವೆ ಇಬ್ಬರು ಪ್ರಭಾವಿ ರಾಜಕಾರಣಿಗಳು ಈ ವಿವಾದಿತ CDಯ ಹಿಂದಿದ್ದಾರೆ ಎಂದಿರುವ ರಮೇಶ್ ಜಾರಕಿಹೊಳಿ ಅವರು ಸೋಮವಾರ ವಿಶೇಷ ತನಿಖಾ ತಂಡದ ಮುಂದೆ ದೂರನ್ನು ನೀಡುವ ಸಾಧ್ಯತೆಯಿದೆ. ದೂರು ಸಲ್ಲಿಸಿದ ನಂತರ ಆ ರಾಜಕಾರಣಿಗಳ ಹೆಸರನ್ನು ಬಹಿರಂಗಪಡಿಸಲು ಜಾರಕಿಹೊಳಿ ಸಹೋದರರು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ.