ಗದಗ್: ಕಣ್ಣು ಹಾಯಿಸಿದೆಲ್ಲೆಲ್ಲಾ ಶಿವಲಿಂಗಗಳ ಸಂಗಮ. ಒಂದೇ ಕಡೆ ನೆಲೆ ನಿಂತಿವೆ ಮುಕ್ಕೋಟಿ ಶಿವಲಿಂಗಗಳು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಇಂದು ಅನನ್ಯ ಕೈಂಕರ್ಯ ನಾಡಿನ ಗಮನಸೆಳೆಯಿತು.
ಶಿವರಾತ್ರಿ ಬಂದ ತಕ್ಷಣ ಈ ಭಾಗದ ಜನ್ರಿಗೆ ಥಟ್ಟನೆ ನೆನಪಾಗೋದು ಇದೇ ಮುಕ್ತಿಮಂದಿರ. ರಂಭಾಪುರಿ ಪೀಠದ ಶಾಖಾ ಮಠವಾಗಿರೋ ಮುಕ್ತಿಮಂದಿರದಲ್ಲಿ ರಂಭಾಪುರಿ ಹಿಂದಿನ ಜಗದ್ಗುರುಗಳಾಗಿದ್ದ ಲಿಂಗೈಕ್ಯ ವೀರಗಂಗಾಧರ ಜಗದ್ಗರುಗಳ ತಪೋಸಮಾಧಿ ಸ್ಥಳವಿದೆ. ಸದ್ಯ ಇಲ್ಲಿ ಮುಕ್ಕೋಟಿ ಶಿವಲಿಂಗಗಳ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದೆ. 2.5 ಅಡಿ ಎತ್ತರದ ಐದು ಸಾವಿರ ಶಿವಲಿಂಗವೊಂದರಲ್ಲಿ ಆರು ಸಾವಿರ ಗರ್ಭಲಿಂಗಗಳಿರುವಂತಹ ಚಿತ್ರಗಳನ್ನು ಕೆತ್ತನೆ ಮಾಡಲಾಗಿದೆ.
ಐದು ಸಾವಿರ ಶಿವಲಿಂಗಗಳಲ್ಲಿ ಆರು ಸಾವಿರ ಗರ್ಭಲಿಂಗಗಳು ಚಿತ್ರಣಗೊಂಡು ಮುಕ್ತಿಮಂದಿರ ಕ್ಷೇತ್ರ ತ್ರೀಕೋಟಿ ಶಿವಲಿಂಗ ಕ್ಷೇತ್ರವಾಗಲು ಸಿದ್ಧಗೊಂಡಿದೆ. ಹೀಗೆ ಐದು ಸಾವಿರ ಶಿವಲಿಂಗಗಳು ಎಂಟು ವರ್ತುಲಗಳಲ್ಲಿ ಪ್ರತಿಷ್ಠಾಪಿತಗೊಂಡು ಮಧ್ಯದಲ್ಲಿ ಲಿಂಗೈಕ್ಯ ಗಂಗಾಧರ ಸನ್ನಿಧಿ ಹಾಗೂ ರೇಣುಕಾಚಾರ್ಯರ ಬೃಹತ್ ಮೂರ್ತಿಗಳ ಭವ್ಯ ಮಂದಿರ ನಿರ್ಮಾಣಗೊಳ್ಳಲಿದೆ. ಅದಕ್ಕಾಗಿ ಈಗಾಗಲೇ ಐದುಸಾವಿರ ಶಿವಲಿಂಗಗಳ ಜೊತೆಗೆ ಒಂದು ಬೃಹತ್ ಶಿವಲಿಂಗ ಸಿದ್ಧಗೊಂಡಿದೆ.
ಈ ಎಲ್ಲ ಶಿವಲಿಂಗಗಳ ಪ್ರತಿಷ್ಠಾಪನೆ ಕೆಲಸವಷ್ಟೇ ಬಾಕಿ ಉಳಿದಿದ್ದು ಈಗಾಗಲೇ ಪ್ರತಿನಿತ್ಯ ನೂರಾರು ಪ್ರವಾಸಿಗರು ಸಾವಿರಾರು ಶಿವಲಿಂಗಗಳ ದರ್ಶನ ಮಾಡಿ ಧನ್ಯರಾಗುತ್ತಿದ್ದಾರೆ. ಒಂದು ಶಿವಲಿಂಗ ಪ್ರತಿಷ್ಠಾಪನೆಗೆ 6001 ರೂಪಾಯಿ ನಿಗದಿ ಪಡಿಸಿದ್ದು ನಾಡಿನಾದ್ಯಂತ ಅನೇಕ ಭಕ್ತರು ತಮ್ಮ ಹೆಸರಿನಲ್ಲಿ ಶಿವಲಿಂಗದ ದೇಣಿಗೆ ಸಲ್ಲಿಸಿದ್ದಾರೆ.