ವರ್ಷದ ಹಿಂದೆ ಬಾರಕೂರು ಬಳಿ ಕಾರು ಅಪಘಾತಕ್ಕೀಡಾಗಿ ಕೆರೆಗೆ ಬಿದ್ದಿದ್ದ ವ್ಯಕ್ತಿಗಳ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಾಲಕಿಗೆ ರಾಜ್ಯ ಸರ್ಕಾರ ಪುರಸ್ಕಾರ.. ಬಾರಕೂರಿನ ಬಾಲಕಿ ನಮನಾಗೆ “ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ”
ಉಡುಪಿ: ವರ್ಷದ ಹಿಂದೆ ಉಡುಪಿ ಜಿಲ್ಲೆ ಬಾರಕೂರು ಬಳಿ ಅಪಘಾತಕ್ಕೀಡಾಗಿ ಕೆರೆಗೆ ಬಿದ್ದಿದ್ದ ವ್ಯಕ್ತಿಗಳ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಾಲಕಿ ನಮನಾ ಬಾರ್ಕೂರು ಇವರಿಗೆ ರಾಜ್ಯ ಸರ್ಕಾರ ಪುರಸ್ಕಾರ ನೀಡಿ ಗೌರವಿಸಿದೆ. ಹಿಂದೆ ಜೀವರಕ್ಷಿಸಿದ್ದ ಸಂದರ್ಭದಲ್ಲಿ ಪ್ರಶಂಸೆಯ ಹೂಮಳೆಯಾಗಿದ್ದರೆ, ಆ ಸಾಧನೆಯ ಕಾರಣಕ್ಕಾಗಿ ಇದೀಗ ಪ್ರಶಸ್ತಿ ಲಭಿಸಿದಾಗ ಬಾಲಕಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.
ಕಳೆದ ವರ್ಷದ ಜೂನ್‌ನಲ್ಲಿ ಉದ್ಯಮಿ ಸಂತೋಷ್ ಶೆಟ್ಟಿ ಅವರಿದ್ದ ಕಾರು, ಬಾರಕೂರು ಬಳಿ ಅಪಘಾತಕ್ಕೀಡಾಗಿ ಚೌಳಿಕೆರೆಗೆ ಉರುಳಿ ಬಿದ್ದಿತ್ತು. ಆ ದುರಂತದಲ್ಲಿ ಸಂತೋಷ್ ಶೆಟ್ಟಿ ಸಾವನ್ನಪ್ಪಿದರಾದರೂ ಅವರ ಸಂಸ್ಥೆಯ ಉದ್ಯೋಗಿ ಶ್ವೇತಾ ಎಂಬವರು ಅಸ್ವಸ್ಥರಾಗಿದ್ದರು. ಆ ಯುವತಿಯು ಜೀವನ್ಮರಣ ಸ್ಥಿತಿಯಲ್ಲಿದ್ದಾಗ ಬಾಲಕಿ ನಮನಾ ಎಂಬ ಬಾಲೆ, ಸೇನಾನಿಯಂತೆ ನೆರವಿಗೆ ಧಾವಿಸಿದ್ದಾಳೆ. ಸ್ಥಳದಲ್ಲಿದ್ದ ಯುವಕರು ಗಾಯಾಳುಗಳನ್ನು ಕೆರೆಯಿಂದ ಮೇಲೆತ್ತಿ ಕರೆತರುತ್ತಿದ್ದಂತೆಯೇ ಅಲ್ಲೇ ಸಮೀಪದಲ್ಲಿದ್ದ ಬಾಲಕಿ ನಮನಾ ಪ್ರಥಮ ಚಿಕಿತ್ಸೆ ನೀಡಿ ಯುವತಿಯ ಪಾಲಿಗೆ ಜೀವ ಸಂಜೀವಿನಿಯಾಗಿದ್ದಳು.
ಈ ಬಗ್ಗೆ ಮಾಧ್ಯಮಗಳು ವರದಿ ಪ್ರಕಟಿಸಿ ಬಾಲಕಿ ನಮನಾಳ ಸಾಧನೆಯನ್ನು ಪ್ರಶಂಸಿತ್ತಲ್ಲದೆ, ಈಕೆಗೆ ಸೂಕ್ತ ಪ್ರಶಸ್ತಿ ನೀಡುವ ಅಗತ್ಯದ ಬಗ್ಗೆ ಮನವರಿಕೆ ಮಾಡಲಾಗಿತ್ತು. ಇದೇ ಬಾಲಕಿ ನಮನಾಗೆ ಈ ಬಾರಿ ಸರ್ಕಾರದಿಂದ ಪುರಸ್ಕಾರ ಸಿಕ್ಕಿದೆ.
ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಕೊಡಲ್ಪಡುವ ಘನತೆಯ ಶೌರ್ಯ ಪ್ರಶಸ್ತಿಯು ಕೊರೊನಾ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡ್ಯೂರಪ್ಪ , ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲ ಜೊಲ್ಲೆಯವರ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ, ನಮನಾಗೆ ಪ್ರತಿಷ್ಠಿತ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ. ಉಡುಪಿ ಜಿಲ್ಲೆಯ ಬಾರಕೂರಿನ ಚೌಳಿಕೆರೆಯ ಕುಮಾರಸ್ವಾಮಿ ಬಿ. ಆರ್. ಮತ್ತು ಸವಿತಾ ಎರ್ಮಾಳ್ ಇವರ ಪುತ್ರಿಯಾದ ಕುಮಾರಿ ನಮನ ಬಿ.ಕೆ. ಇವರಿಗೆ “ಕೆಳದಿ ಚೆನ್ನಮ್ಮ ರಾಜ್ಯ ಶೌರ್ಯ ಪ್ರಶಸ್ತಿ”ಯನ್ನು ಅರಮನೆ ಮೈದಾನದ ಭವ್ಯ ವೇದಿಕೆಯಲ್ಲಿ ಗಣ್ಯರು ಪ್ರದಾನ ಮಾಡಿದರು.
ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯು ಪ್ರಶಸ್ತಿ ಪತ್ರ, ನಗದು ಬಹುಮಾನವನ್ನು ಒಳಗೊಂಡಿದೆ. ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪುರಸ್ಕಾರ ಪಡೆದ ಕುಮಾರಿ ನಮನ ಬಿ.ಕೆ. ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನ ಹತ್ತನೇ ತರಗತಿಯ ವಿದ್ಯಾರ್ಥಿನಿ.