ಆಶಾ ಕಾರ್ಯಕರ್ತೆಯರ ಸಮಸ್ಯೆ.. ಕಣ್ಣಿದ್ದೂ ಕುರುಡಾಯಿತೇ ಸರ್ಕಾರ.. ಮತ್ತೆ ಹೋರಾಟಕ್ಕೆ ಮುನ್ನ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ಆಗ್ರಹ.
ಬೆಂಗಳೂರು: ಸ್ವಸ್ಥ ಸಮಾಜ ನಿರ್ಮಾಣದ ಸಂಕಲ್ಪ ತೊಟ್ಟು ಆರೋಗ್ಯ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಶಾ ಕಾರ್ಯಕರ್ತೆಯರು ಇದೀಗ ಸಂಕಷ್ಟದಲ್ಲಿದ್ದಾರೆ. ಸರ್ಕಾರದ ಅಸಹಕಾರದಿಂದಾಗಿ ಈ ಆಶಾ ಕಾರ್ಯಕರ್ತೆಯರು ಅಸಹಾಕರಾಗಿದ್ದು ಇದೀಗ ಇಡೀ ಆಡಳಿತ ವ್ಯವಸ್ಥೆ ವಿದುದ್ದ ಸಮರಕ್ಕೆ ಸಜ್ಜಾಗಿದ್ದಾರೆ.
ಏನಿದು ಸಮಸ್ಯೆ?
ವಿವಿಧ ಸಮೀಕ್ಷೆಗಳ ಮೂಲಕ ಆಶಾ ಕಾರ್ಯಕರ್ತೆಯರ ಹೊಣೆಭಾರ ಹೆಚ್ಚಿಸುವ ಪ್ರಯತ್ನ ಅಧಿಕಾರಿಗಳ ಕಡೆಯಿಂದ ನಡೆದಿದೆ. ಈ ಸಮಸ್ಯೆ ಬಗ್ಗೆ ಆಶಾ ಕಾರ್ಯಕರ್ತೆಯರ ಸಂಘದ ಪ್ರಮುಖರು ಇತ್ತೀಚೆಗೆ ಸಭೆ ನಡೆಸಿ ಅಧಿಕಾರಿಗಳ ಗಮನಸೆಳೆದಿದ್ದಾರೆ. ಆಶಾ ಕಾರ್ಯಕರ್ತೆಯರಿಗೆ ನಿಗದಿ ಪಡಿಸಿದ ಕೆಲಸಗಳನ್ನು ಹೊರತುಪಡಿಸಿ, ಆರೋಗ್ಯ ಇಲಾಖೆಯ ಮತ್ತು ವಿವಿಧ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಒತ್ತಾಯದಿಂದ ಆಶಾಗಳನ್ನು ಬಳಸಿಕೊಳ್ಳುತ್ತಿದೆ. ಈ ಬಗ್ಗೆ ಸರ್ಕಾರದ ಗಮನಸೆಳೆಯಲಾಗಿದೆ. ಹಲವಾರು ಸರ್ವೆಗಳನ್ನು ಮೊಬೈಲ್ ಆ್ಯಪ್ ಮುಖಾಂತರ ಮಾಡಲು ಒತ್ತಾಯಿಸುತ್ತಿರುವುದು, ಈ ಸಂಜೀವಿನಿ, ಎನ್‍ಸಿಡಿ ಸರ್ವೆ, 0-18 ಮಕ್ಕಳ ಮನೆ ಮನೆ ಸರ್ವೆ ಮೊದಲಾದ ಕೆಲಸಗಳನ್ನು ಮಾಡಲು ಸರ್ಕಾರದ ನಿರ್ದೇಶನ ಇಲ್ಲದಿದ್ದರೂ ಆಶಾಗಳಿಂದ ಮಾಡಿಸಲಾಗುತ್ತಿದೆ ಎಂಬುದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರ ಆರೋಪ.
ಆಶಾಗಳಿಗೆ ಮೊಬೈಲ್ ಮತ್ತು ಡಾಟಾ ನೀಡದೇ ಇರುವುದರಿಂದ ಈ ಕೆಲಸ ಕಷ್ಟಸಾಧ್ಯ. ಮೊಬೈಲ್ ಆ್ಯಪ್ ಮೂಲಕ ಕಡಿಮೆ ಅವಧಿಯಲ್ಲಿ ಟಾರ್ಗೆಟ್ ನೀಡಿ ಸಮೀಕ್ಷೆ ಮಾಡಬೇಕೆಂಬ ಒತ್ತಡವೂ ಸರಿಯಲ್ಲ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಿ.ಮ.ಆ.ಸಹಾಯಕಿಯರು, ಮತ್ತು ಎಂಎಲ್‍ಎಚ್‍ಪಿ ಸಿಬ್ಬಂದಿ ಸಮೀಕ್ಷೆ ಮಾಡಬೇಕೆಂದು ಆದೇಶಿಸಲಾಗಿದೆ. ಇದು ಎಷ್ಟು ಸರಿ ಎಂಬುದು ಈ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಪ್ರಮುಖರ ಪ್ರಶ್ನೆ.
ಹಲವಾರು ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಮಾತ್ರ ಮನೆಗಳ ಸಮೀಕ್ಷಾ ಕಾರ್ಯವನ್ನು ಹಂಚಿ ಸರ್ವೇ ಮಾಡಲು ಹೇಳಿರುತ್ತಾರೆ. ಈ ಪೈಕಿ ಹಲವಾರು ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಈ-ಸಮೀಕ್ಷೆ ಮಾಡಲು ಸದ್ಯಕ್ಕೆ ಆಗುವುದಿಲ್ಲ ಎಂದಿರುತ್ತಾರೆ. ಹಾಗಾಗಿ ಆಶಾ ಕಾರ್ಯಕರ್ತೆಯರಷ್ಟೇ ಈ ಸರ್ವೆ ಮಾಡುವ ಒತ್ತಡದಲ್ಲಿ ಸಿಲುಕಿದ್ದಾರೆ ಎಂದು ಸಂಘದ ಪ್ರಮುಖರು ದೂರಿದ್ದಾರೆ. ಮೊಬೈಲ್ ಮತ್ತು ಡಾಟಾ ನೀಡದೆ ಒತ್ತಾಯ ಪೂರಕ ಸರ್ವೆ ಮಾಡಿಸಲು ಸಿಬ್ಬಂದಿ ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಗಂಡ- ಮಕ್ಕಳಿಂದ ಈ ಕೆಲಸ ಮಾಡಿಸಿ ಅಥವಾ ಕೆಲಸ ಬಿಡಿ ಎಂದೂ ಅಧಿಕಾರಿಗಳು ಹೇಳುತ್ತಿದ್ದಾರೆಂಬುದು ಆಶಾ ಕಾರ್ಯಕರ್ತೆಯರ ಆಳಲು.
ಸರ್ವೇ ಕೂಡಾ ಕಷ್ಟದ ಕೆಲಸ:
ಸರ್ವೆಗೆ ಸಂಬಂಧಿಸಿದಂತೆ ಆರೋಗ್ಯ ವಿಷಯದ ಮಾಹಿತಿಯನ್ನು ಮಾತ್ರ ಆಶಾ ಕಾರ್ಯಕರ್ತೆ ಸಂಗ್ರಹಿಸುತ್ತಾಳೆ. ಇನ್ನಿತರೆ ಆರ್ಥಿಕ ಮಾಹಿತಿ ಕೇಳಿದಾಗ ಜನರಿಂದ ವಿರೋಧದ ಸನ್ನಿವೇಶವೂ ಎದುರಾಗುತ್ತಿವೆ. ಇತ್ತೀಚಿಗೆ ಆಹಾರ ಮತ್ತು ನಾಗರೀಕ ಸೇವೆ ಸಚಿವರು- ದ್ವಿಚಕ್ರ ವಾಹನ, ಟಿ.ವಿ ಇರುವವರಿಗೆ ಪಡಿತರ ನಿಲ್ಲಿಸುವುದಾಗಿ ತಿಳಿಸಿರುತ್ತಾರೆ. ಜನತೆ ಇದರ ಪ್ರಭಾವದಲ್ಲಿ ಇರುವುದರಿಂದ ಈಗ ಈ ಮಾಹಿತಿಗಳನ್ನು ಜನತೆ ನೀಡಲು ನಿರಾಕರಿಸುವರು. ಇಂತಹ ವಿವರಗಳನ್ನು ಸಮೀಕ್ಷೆಯಲ್ಲಿ ಕೈಬಿಟ್ಟು ಸಮೀಕ್ಷೆ ನಡೆಸಬೇಕಾಗುತ್ತದೆ. ಈ ನಡುವೆ, ಆಶಾ ಕಾರ್ಯಕರ್ತೆಯರು ತಮ್ಮ ಮೂಲ ಕೆಲಸಗಳಾದ ಸುಗಮ ಹೆರಿಗೆ, ಸ್ವಸ್ಥ ಮಗುವಿನ ಜನನ, ತಾಯಿ-ಶಿಶು ಆರೈಕೆಗಳ ಕುರಿತ ಸೇವೆಗಳು, ಗ್ರಾಮ ನೈರ್ಮಲ್ಯ ಸೇರಿದಂತೆ ವಿವಿಧ ಕಾರ್ಯ ಚಟುವಟಿಕೆಗಳಿಗೆ ಮಾಡಲು ತೊಂದರೆಯೂ ಆಗುತ್ತಿದೆ ಎಂದು ಸಂಘ ಸರ್ಕಾರಕ್ಜೆ ಮನವರಿಕೆ ಮಾಡಿದೆ., ತಮ್ಮ, ಬೇಡಿಕೆಗಳನ್ನು ಈಡೇರಿಸಿದಲ್ಲಿ ಈ-ಸಮೀಕ್ಷೆಗೆ ನಡೆಸಲು ಆಶಾ ಕಾರ್ಯಕರ್ತೆಯರು ಸಿದ್ದರಿದ್ದಾರೆ ಎಂದು ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಅಧ್ಯಕ್ಷ ಕೆ.ಸೋಮಶೇಖರ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ. ಈ ಸಂಬಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
‘ಆಶಾ..’ ಹಕ್ಕೊತ್ತಾಯಗಳು ಹೀಗಿದೆ:
- ಆಶಾ ಕಾರ್ಯಕರ್ತೆಯರಿಗೆ ಈ-ಸಮೀಕ್ಷೆ ಮಾಡಲು ಮೊಬೈಲ್/ಟ್ಯಾಬ್ ಜೊತೆ ಡಾಟಾ ಒದಗಿಸಿ ಸಮೀಕ್ಷೆ ನಡೆಸಿ.
- ಆಶಾ ಕಾರ್ಯಕರ್ತೆಯರಲ್ಲಿ ಯಾರಿಗೆ ಮೊಬೈಲ್/ಟ್ಯಾಬ್ ಬಳಸಲು ಆಗುವುದಿಲ್ಲವೊ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿ.
- ಆಶಾ ಕಾರ್ಯಕರ್ತೆಯರಿಗೆ ಈ-ಸಮೀಕ್ಷೆಗೆ ಸೂಕ್ತ ಸಂಭಾವನೆ ನಿಗದಿ ಮಾಡಿ.
- ಒತ್ತಡ ಮಾಡದೆ ಅಗತ್ಯವಿರುವಷ್ಟು ಸಮಯ ನೀಡಿ, ಈ-ಸಮೀಕ್ಷೆ ಮಾಡಿಸಿ.
- ಆರ್ಥಿಕ ಮಾಹಿತಿಯನ್ನು ಈ-ಸಮೀಕ್ಷೆಯಿಂದ ಕೈಬಿಡಿ.
- ಸಂಘದ ಮುಖಂಡರೊಂದಿಗೆ ನಡೆದ ರಾಜ್ಯ ಮಟ್ಟದ ಕುಂದುಕೊರತೆ ಸಭೆಯ ನಡಾವಳಿಯನ್ನು ಕೂಡಲೇ ನೀಡಿ.