ಡ್ರಗ್ಸ್ ಮಾಫಿಯ ವಿರುದ್ಧ ಉದ್ಯಾನ ನಗರಿ ಪೊಲೀಸರ ಭರ್ಜರಿ ಬೇಟೆ.. ಎಸಿಪಿ ಎನ್.ಬಿ.ಸಕ್ರಿ ನೇತೃತ್ವದ ಪೊಲೀಸರು ಸಿನಿಮೀಯ ರೀತಿ ಕಾರ್ಯಾಚರಣೆ ಕೈಗೊಂಡು 7 ವಿದೇಶಿಯರೂ ಸೇರಿ 9 ಮಂದಿಯನ್ನು ಸೆರೆಹಿಡಿದಿದ್ದಾರೆ. ಪೆಡ್ಲರ್‌ಗಳಿಂದ ಕೋಟ್ಯಾಂತರ ರೂ ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಂಡು ಇತಿಹಾಸ ಬರೆದಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಾಣಸವಾಡಿ ಉಪವಿಭಾಗದ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಸಹಾಯಕ ಪೊಲೀಸ್ ಆಯುಕ್ತ ಎನ್.ಬಿ.ಸಕ್ರಿ ಹಾಗೂ ಗೋವಿಂದಪುರ ಠಾಣೆಯ ಇನ್‌ಸ್ಪೆಕ್ಟರ್ ಪ್ರಕಾಶ್ ನೇತೃತ್ವದ ಪೊಲೀಸರು ಡ್ರಗ್ ಮಾಫಿಯಾದ ವಿರಾಟ್ ಜಾಲವನ್ನೇ ಬೇಧಿಸಿದ್ದು, ಈ ಖಾಕಿ ತಂಡ ನಡೆಸಿದ ಕಾರ್ಯಾಚರಣೆ ಇಡೀ ಪೊಲೀಸ್ ಇಲಾಖೆಯೇ ಮೆಚ್ಚುಗೆ ಗಳಿಸುವಂತಿದೆ.
ಈ ಪೊಲೀಸರು ತೋಡಿದ ಖೆಡ್ಡಕ್ಕೆ ಅಂತಾರಾಷ್ಟ್ರೀಯ ಡ್ರಗ್ ಮಾಫಿಯಾವೇ ಬಿದ್ದಿದ್ದು, ಇಬ್ವರು ವಿದೇಶಿ ಪ್ರಜೆಗಳು ಸೇರಿದಂತೆ 9 ಮಂದಿಯನ್ನು ಪೊಲೀಸರು ಕಂಬಿಯ ಹಿಂದೆ ಪೆರೇಡ್ ಮಾಡಿದ್ದಾರೆ.
ರಾಜಧಾನಿ ಬೆಂಗಳೂರಿಗೆ ಡ್ರಗ್ ಜಾಲ ಸವಾಲಾಗಿ ಮಾರ್ಪಟ್ಟಿದೆ. ಅದರಲ್ಲೂ ಶಾಲಾ ಕಾಲೇಜು ಸುತ್ತಮುತ್ತ ನಿಗೂಢವಾಗಿ ಕಾರ್ಯಾಚರಿಸುತ್ತಿರುವ ಈ ಮಾಫಿಯಾ ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿ ಯುವಜನ ಸಮೂಹಕ್ಕೆ ಪೂರೈಕೆ ಮಾಡುತ್ತಿತ್ತು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಗೋವಿಂದಪುರ ಠಾಣೆಯ ಇನ್‌ಸ್ಪೆಕ್ಟರ್ ಪ್ರಕಾಶ್ ತನ್ನದೇ ಶೈಲಿಯಲ್ಲಿ ಕಾರ್ಯಾಚರಣೆಗೆ ಧುಮುಕಿದರು. ಈ ಪೊಲೀಸರಿಗೆ ಮಾರ್ಗದರ್ಶನ ನೀಡುತ್ತಿದ್ದುದು ಬಾಣಸವಾಡಿ ಉಪವಿಭಾಗದ ಎಸಿಪಿ ಸಕ್ರಿ. ಅದೇ ಹೊತ್ತಿಗೆ ಬಾನಸವಾಡಿ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ಸಾರಥ್ಯದ ಟೀಂ ಮತ್ತೊಂದು ಮಜಲಲ್ಲಿ ಡ್ರಗ್ ಪೆಡ್ಲರ್‌ಗಳ ಅಡ್ಡೆಗಳ ಸುತ್ತ ಚಕ್ರವ್ಯೂಹ ರಚಿಸಿ ಮತ್ತಷ್ಟು ಮಂದಿಯನ್ನು ಸೆರೆಹಿಡಿದಿದ್ದಾರೆ.
ಗೌರಿ ಕೇಸ್ ಮಾದರಿಯಲ್ಲೇ ಬೇಟೆ
ಈ ಹಿಂದೆ ಪೊಲೀಸ್ ಇಲಾಖೆಗೆ ಸವಾಲಾಗಿದ್ದ ಗೌರಿ ಲಂಕೇಶ್ ಕೊಲೆ ಪ್ರಕರಣದಲ್ಲಿ ಚಾಲಾಕಿ ಹಂತಕಪಡೆಯನ್ನು ರಹಸ್ಯ ಕಾರ್ಯಾಚರಣೆ ಮೂಲಕ ಖೆಡ್ಡಾಕ್ಕೆ ಕೆಡವಿ ರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಗಳಿಸಿದ್ದ ಎಸಿಪಿ ನಿಂಗಪ್ಪ ಬಿ.ಸಕ್ರಿ, ಅದೇ ಮಾದರಿಯಲ್ಲಿ ಈ ಡ್ರಗ್ ಮಾಫಿಯಾದ ಕಿರಾತಕರಿಗೂ ಬೇಟೆಯಾಡಿದರು. ಈ ಮಾಫಿಯಾದ ಕಬಂದ ಬಾಹು ವಿದೇಶಗಳಿಗೂ ಚಾಚಿದ್ದನ್ನು ಪತ್ತೆ ಮಾಡಿದ ಈ ಪೊಲೀಸ್ ತಂಡ ಕಳೆದೊಂದು ವಾರದಲ್ಲಿ ರಹಸ್ಯವಾಗಿ ಕಾರ್ಯಾಚರಣೆಗಿಳಿದು ಬರೋಬ್ಬರಿ 9 ಮಂದಿಯನ್ನು ಬಂಧಿಸಿ ಕಂಬಿಯ ಹಿಂದಕ್ಕೆ ತಳ್ಳಿದೆ.
ಮಾದಕವಸ್ತುಗಳ ಸರಬರಾಜು, ಮಾರಾಟದ ವಿರುದ್ಧ ಇತ್ತೀಚಿನ ದಿನಗಳಲ್ಲಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆ ಇದಾಗಿದ್ದು ಆರೋಪಿಗಳಿಂದ ಬರೋಬ್ಬರಿ 4 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಸಕ್ರಿ ತಂಡದ ಬಗ್ಗೆ ಸಿಹಿ ಪ್ರಶಂಸೆ
ಬಾಣಸವಾಡಿ ಉಪವಿಭಾಗದ ಪೊಲೀಸರ ಯಶಸ್ವಿ ಕಾರ್ಯಾಚರಣೆ ಬಗ್ಗೆ ಶಹಬ್ಬಾಶ್‌ಗಿರಿ ನೀಡಿರುವ ಪೊಲೀಸ್ ಆಯುಕ್ತರು ತಾವೇ ಖುದ್ದು ಸುದ್ದಿಗೋಷ್ಠಿ ನಡೆಸಿ ತಮ್ಮ ವ್ಯಾಪ್ತಿಯ ಪೊಲೀಸರ ಸಾಧನೆ ಬಗ್ಗೆ ಕೊಂಡಾಡಿದರು. ಬಂಧಿತ 9 ಪೆಡ್ಲರ್‌ಗಳ ಪೈಕಿ 7 ಮಂದಿ ವಿದೇಶಿಗರು ಎಂಬುದು ಅಚ್ಚರಿಯ ಸಂಗತಿ. ಈ ಜಾಲದಿಂದ ಸುಮಾರು 2719 ಗ್ರಾಂ ಎಂಡಿಎಂಎ, 200 ಗ್ರಾಂ ಕೊಕೇನ್, 1939 ಎಕ್ಸಟೆನ್ಸಿ ಮಾತ್ರೆಗಳು, 526 ಎಲ್.ಎಸ್.ಡಿ.ಸ್ಟ್ರೀಪ್ಸ್ ಹಾಗೂ 42.5 ಕೆಜಿ ಗಾಂಜಾ ಸೇರಿ 4 ಕೋಟಿ ರೂ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಅಂಕಿ ಅಂಶ ಒದಗಿಸಿದರು.
ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಷ್ಠಿತ ವ್ಯಕ್ತಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ 25ರ ಹರೆಯದ ಹ್ಯಾರಿಸನ್ ಅಗಭಂಟಿ ಹಾಗೂ 30 ವರ್ಷ ಪ್ರಾಯದ ಜಾನ್ ನ್ಯಾನ್ಸೊ ಎಂಬಿಬ್ಬರನ್ಬು ಬಂಧಿಸಿ 82 ಗ್ರಾಂ ಎಕ್ಸಟೆನ್ಸಿ ಮಾತ್ರೆ, ಕೊಕೇನ್, ಇನ್ನಿತರ ಡ್ರಗ್ಸ್, 7ಮೊಬೈಲ್, 2 ಬೈಕ್ ಸೇರಿ 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಸಹಚರರ ಹೆಜ್ಜೆ ಜಾಡು ಬೆನ್ನತ್ತಿದ ಈ ಪೊಲೀಸರು, ನೈಜೀರಿಯಾ ಮೂಲದ ಮೂಸಾ ಹಾಗೂ ಯಮಾನ್ಯುಯಲ್ ಎಂಬವನ್ನೂ ಸೆರೆ ಹಿಡಿದು ಅವರಿಂದಲೂ 200 ಗ್ರಾಂ ಕೊಕೇನ್, ಎಂಡಿಎಂಎ ಸೇರಿ 3.5 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಂಡರು ಎಂದು ಅವರು ಮಾಹಿತಿ ಹಂಚಿಕೊಂಡರು.
ಈ ವಿದೇಶಿ ಪೆಡ್ಲರ್‌ಗಳ ಜೊತೆ ನಂಟು ಬೆಳೆಸಿದ್ದ ಬೆಂಗಳೂರಿನ ಯುವಕರ ಬಗ್ಗೆ ಮತ್ತಷ್ಟು ಮಾಹಿತಿ ಪಡೆದ ಪೊಲೀಸರು, ತಮ್ಮ ಕಾರ್ಯಾಚರಣೆಯನ್ನು ಮತ್ತೊಂದು ಮಜಲಿಗೆ ವಿಸ್ತರಿಸಿದರಲ್ಲದೆ, ಅವರು ನೀಡಿದ ಮಾಹಿತಿಯಂತೆ ಬೆಂಗಳೂರಿನ ಇಬ್ಬರನ್ನು ಬಂಧಿಸಿದರು.ಈ ಪೈಕಿ ಒಬ್ಬಾತ ಈ ಹಿಂದೆ ಬಿಗ್‌ಬಾಸ್ ಸ್ಪರ್ಧಿಯಾಗಿದ್ದ ಮಸ್ತಾನ್‌ಚಂದ್ರ ಎಂದು ಗುರುತಿಸಲಾಗಿದೆ. ಇನ್ನೊಬ್ಬ ಬಂಧಿತನ ಹೆಸರು ಕೇಶವ.
ಇದೇ ವೇಳೆ, ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಡ್ರಗ್ಸ್ ಮಾರಾಟ ಜಾಲವನ್ನೂ ಬೇಧಿಸಿರುವ ಪೊಲೀಸರು ಅಲ್ಲೂ ನಾಲ್ವರು ವಿದೇಶಿ ಪ್ರಜೆಗಳು ಹಾಗೂ ಸ್ಥಳೀಯನೊಬ್ಬನನ್ನು ಬಂಧಿಸಿ 1 ಲಕ್ಷ ರೂ ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಂಡಿದ್ದಾರೆ.
ಅದೇ ಹೊತ್ತಿಗೆ, ಬಾಣಸವಾಡಿ ಠಾಣೆಯ ಇನ್‌ಸ್ಪೆಕ್ಟರ್ ಸತೀಶ್ ನೇತೃತ್ವದಲ್ಲಿ ಬೇಟೆಗಿಳಿದ ಪೊಲೀಸರು ಜ್ಯೋತಿ ಸ್ಕೂಲ್ ಬಳಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಕೆಜಿ ಹಳ್ಳಿಯ ರಿಜ್ವಾನ್ ಎಂಬಾತನನ್ನು ಬಂಧಿಸಿ, ಸುಮಾರು 45 ಸಾವಿರ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಹಾಗೂ ಡಿಸಿಪಿ ಡಾ.ಶರಣಪ್ಪ ಅವರ ಉಪಸ್ಥಿತಿಯಲ್ಲಿ ನಡೆಸಿದ ಈ ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಕಮೀಷನರ್ ಕಮಲ್ ಪಂತ್ ಅವರು ಕಾರ್ಯಾಚರಣೆ ನಡರಸಿದ ಪೊಲೀಸರ ಬಗ್ಗೆ ಅಭಿನಂಧನೆಯ ಮಾತುಗಳನ್ನಾಡಿ ಖಾಕಿ ಸಾಮ್ರಾಜ್ಯದ ಉತ್ಸಾಹವನ್ನು ಹೆಚ್ಚಿಸಿದರು.