ಬೆಂಗಳೂರು: : ಅಫೆಡವಿಟ್ ಬೇಸ್ಡ್ ಕ್ಲಿಯರೆನ್ಸ್ (ಎಬಿಸಿ) ಯೋಜನೆಯ ಅನುಷ್ಠಾನ, ಕೈಗಾರಿಕಾ ಸೌಲಭ್ಯ ಕಾಯ್ದೆಯ ತಿದ್ದುಪಡಿ ಮತ್ತು ಹೊಸ ಕೈಗಾರಿಕಾ ನೀತಿಯ ಘೋಷಣೆಯಿಂದಾಗಿ ಕರ್ನಾಟಕ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಯ ಕಾರ್ಯ ಸುಲಭವಾಗಿಸಿದೆ. ಇವೆಲ್ಲ ಕ್ರಮಗಳು ಅನುಷ್ಠಾನದಿಂದಾಗಿ ಕರ್ನಾಟಕ ರಾಜ್ಯ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಅನುಷ್ಠಾನದಲ್ಲಿ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಮುಂಚೂಣಿಯಲ್ಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಅಸೋಚಾಮ್ ಆಯೋಜಿಸಿದ್ದ ನವ ಕರ್ನಾಟಕ ಈಸ್ ಆಫ್ ಡ್ಯೂಯಿಂಗ್ ಬ್ಯುಸಿನೆಸ್ ವೇಬಿನಾರ್ ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ಭಾರತ ದೇಶವನ್ನು ಕೈಗಾರಿಕಾ ಮತ್ತು ಬಂಡವಾಳ ಹೂಡಿಕೆ ಸ್ನೇಹಿ ದೇಶವನ್ನಾಗಿಸಿದೆ. ವಿಶ್ವ ಬ್ಯಾಂಕಿನ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಸುಚ್ಯಾಂಕದಲ್ಲಿ 2014ನೇ ಸಾಲಿನಲ್ಲಿ 142 ನೇ ಸ್ಥಾನದಲ್ಲಿದ್ದ ಭಾರತ ದೇಶ 2019 ರಲ್ಲಿ 63 ನೇ ಸ್ಥಾನ ಪಡೆದುಕೊಂಡಿರುವುದು ಇದಕ್ಕೆ ಸಾಕ್ಷಿ ಎಂದರು.
ಭಾರತದ ಸಿಲಿಕಾನ್ ವ್ಯಾಲಿ ಎಂದೇ ಖ್ಯಾತಿ ಪಡೆದಿರುವ ಕರ್ನಾಟಕ ರಾಜ್ಯ, ಐಟಿ, ಮಾಹಿತಿ ತಂತ್ರಜ್ಞಾನ ಅವಲಂಬಿತ ಸೇವೆಗಳು, ಮಷೀನ್ ಟೂಲ್ಸ್, ಏರೋಸ್ಪೇಸ್, ಬಯೋಟೆಕ್ನಾಲಜಿ ಮತ್ತು ಇಂಜಿನಿಯರಿಂಗ್ ಡಿಸೈನ್ ಕ್ಷೇತ್ರದಲ್ಲಿ ಮುಂಚೂಣಿಯ ಸ್ಥಾನ ಹೊಂದಿದೆ. ಇದೇ ರೀತಿ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಅನುಷ್ಠಾನದಲ್ಲೂ ಮುಂಚೂಣಿಯಲ್ಲಿದ್ದು, ಕೈಗಾರಿಕಾ ಸ್ನೇಹಿ, ಪಾರದರ್ಶಕ ಮತ್ತು ಸರಳೀಕೃತ ನಿಯಮಾವಳಿಗಳು ಮತ್ತು ಕಾನೂನುಗಳಿಂದಾಗಿ ರಾಜ್ಯದಲ್ಲಿ ಬೃಹತ್ ಅಷ್ಟೇ ಅಲ್ಲದೆ, ಎಮ್‌ಎಸ್‌ಎಂಇ ಮತ್ತು ಸ್ಟಾರ್ಟ್ ಅಪ್‌ಗಳನ್ನು ರಾಜ್ಯದಲ್ಲಿ ಸ್ಥಾಪನೆಯ ಕಾರ್ಯವನ್ನು ಸುಲಭಗೊಳಿಸಿವೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾದ ಎಬಿಸಿ – ಅಫಿಡವಿಟ್ ಬೇಸ್ಡ್ ಕ್ಲೀಯರೆನ್ಸ್ ಸ್ಕೀಮ್, ಕೈಗಾರಿಕಾ ಸೌಲಭ್ಯ ತಿದ್ದುಪಡಿ ಅಧಿನಿಯಮ ಮತ್ತು ನೂತನ ಕೈಗಾರಿಕಾ ನೀತಿ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಇದ್ದಂತಹ ಬಹಳಷ್ಟು ತೊಡಕುಗಳನ್ನು ಸರಳೀಕೃತಗೊಳಿಸುವಲ್ಲಿ ಯಶಸ್ವಿಯಾಗಿವೆ. ಈ ಎಲ್ಲಾ ಉಪಕ್ರಮಗಳು ಮುಂಬರುವ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಸೂಚ್ಯಾಂಕದಲ್ಲಿ ನಮ್ಮ ರಾಜ್ಯ ಪ್ರಮುಖ ಸ್ಥಾನ ಪಡೆದುಕೊಳ್ಳುವಲ್ಲಿ ಮುಖ್ಯ ಪಾತ್ರವನ್ನು ವಹಿಸಲಿವೆ ಎಂದು ತಿಳಿಸಿದರು.
ಪ್ರತಿ ವರ್ಷವೂ ನಾವು ರಾಜ್ಯದಲ್ಲಿದ್ದ ಜಟಿಲ ನಿಯಮಾವಳಿಗಳನ್ನು ಸರಳೀಕೃತಗೊಳಿಸುವತ್ತ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದ್ದೇವೆ. ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ನಿಂದಾಗಿ ಕೈಗಾರಿಕಾ ಕ್ಷೇತ್ರದಲ್ಲಿ ಕ್ಷಿಪ್ರವಾಗಿ ಅಭಿವೃದ್ದಿಯನ್ನು ಕಾಣಬಹುದು ಎಂಬುದನ್ನು ನಾವು ಅರಿತುಕೊಂಡಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಗೌರವ್ ಗುಪ್ತಾ, ಡಿಪಿಐಟಿ ನಿರ್ದೇಶಕಿ, ಸುಪ್ರಿಯಾ ಎಸ್ ದೇವಸ್ಥಲ್ಲಿ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ ಎನ್ ಶಿವಶಂಕರ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.