ಬೆಂಗಳೂರು: ಹೈಸ್ಕೂಲ್ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿದೆ ಎಂಬ ವರದಿಯನ್ನು ಮುಂದಿಟ್ಟು ಇದೀಗ ಇನ್ನುಳಿದ ಶಾಲಾ ತರಗತಿಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ತಯಾರಿ ನಡೆಸುತ್ತಿದೆ.
ಕೋವಿಡ್ ವೈರಾಣು ಸೋಂಕು ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ಶಾಲಾ ಕಾಲೇಜು ಶಿಕ್ಷಣ ವ್ಯವಸ್ಥೆ ಏರುಪೇರಾಗಿದೆ. ಹೀಗಿದ್ದರೂ ವರ್ಷಾಂತ್ಯದ ಕೆಲವು ತಿಂಗಳ ಅವಧಿಯಲ್ಲಾದರೂ ತರಗತಿಗಳು ನಡೆಯಲಿ ಎಂಬ ಕಾರಣದಿಂದ ಹೈಸ್ಕೂಲ್ ಮೇಲ್ಪಟ್ಟ ಆಯ್ದ ಶಾಲಾ ಕಾಲೇಜು ತರಗತಿಗಳು ಆರಂಭವಾಗಿವೆ. ಇದೇ ಸಂದರ್ಭದಲ್ಲಿ ಇನ್ನುಳಿದ ತರಗತಿಗಳನ್ನೂ ಆರಂಭಿಸಲು ಅನುಮತಿ ನೀಡಬೇಕೆಂದು ಶಿಕ್ಷಣ ಸಂಸ್ಥೆಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿವೆ.
ಇನ್ನೊಂದೆಡೆ, 9, 10 ಮತ್ತು ಪಿಯುಸಿ ತರಗತಿಗಳನ್ನು ಪುನರಾರಂಭಿಸಿದ ನಂತರ ಒಂದರಿಂದ 8ನೇ ತರಗತಿವರೆಗಿನ ಶಾಲಾ ಮಕ್ಕಳ ತರಗತಿ ಪುನರಾರಂಭಕ್ಕೆ ಸರ್ಕಾರ ಸಿದ್ದತೆ ನಡೆಸುತ್ತಿದೆ. ಆರೋಗ್ಯ ಇಲಾಖೆ ಮತ್ತು ತಾಂತ್ರಿಕ ಸಲಹಾ ಸಮಿತಿ ಸಭೆ ಫೆಬ್ರವರಿ 16 ರಂದು ನಡೆಯಲಿದ್ದು ಅನಂತರ ಅಭಿಪ್ರಯಗಳನ್ನಾಧರಿಸಿ ಕ್ರಮ ಕೈಗೊಳ್ಳಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.