ದೊಡ್ಡಬಳ್ಳಾಪುರ: ಇತ್ತೀಚೆಗೆ ವಿದಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಮುಂದೆ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಭರದಲ್ಲಿ ಆರ್‌ಟಿಐ ಕಾರ್ಯಕರ್ತರ ಬಗ್ಗೆ ಅವಹೇನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ರಾಜ್ಯ ಮಾಹಿತಿಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ವತಿಯಿಂದ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿ.ಶಿವಶಂಕರ್ ಮಾತನಾಡಿ ಭ್ರಷ್ಟಾಚಾರ ಬಯಲು ಮಾಡುವ ಆರ್‌ಟಿಟಿಐ ಕಾರ್ಯಕರ್ತರ ಬಗ್ಗೆ ಹಗುರವಾಗಿ ಮಾತನಾಡುತ್ತಾ ಹಾದಿಬೀದಿಯಲ್ಲಿ ಹೋಗೊ ಜನ ಕೇಸ್ ಹಾಕಿ ನಮಗೆ ಕಿರುಕುಳ ಕೊಡುತಾರೆ ಎಂದು ಮಾತನಾಡುವ ಮುಂಚೆ ಸ್ವಲ್ಪ ಯೋಚನೆ ಮಾಡಿ ಮಾನ್ಯ ಮುಖ್ಯಮಂತ್ರಿಗಳೇ, ಸರ್ಕಾರ ಉಳಿಸಲಿಕ್ಕೆ ಮತ್ತು ಆಡಳಿತದ ಅಂಕು ಡೊಂಕುಗಳನ್ನು ಬಯಲು ಮಾಡಲಿಕ್ಕೆ ಮೀಸಲಾಗಿರುವ ಏಕೈಕ ಮಾರ್ಗ ಮಾಹಿತಿಹಕ್ಕು. ಅದರ ಅಡಿಯಲ್ಲಿ ಭ್ರಷ್ಟಾಚಾರವನ್ನು ಬಯಲು ಮಾಡಲು ಇಡೀ ರಾಜ್ಯಾದ್ಯಂತ ಸೈನಿಕರಂತೆ ನಿಂತು ಭ್ರಷ್ಟ ಅಧಿಕಾರಿಗಳಿಂದ ಬರುವ ಆರೋಪಗಳನ್ನು ಲೆಕ್ಕಿಸದೆ ತಮ್ಮ ಸ್ವಂತ ಹಣದಿಂದ ಮಾಹಿತಿ ಪಡೆದು ನ್ಯಾಯಯುತ ಹೋರಾಟ ಮಾಡುವ ಪ್ರಾಮಾಣಿಕರನ್ನು ಅವಹೇಳನೆ ಮಾಡುವ ಅಧಿಕಾರ ನಿಮಗೆ ನೀಡಿದ್ದಾದರು ಯಾರು ಎಂದು ಪ್ರಶ್ನಿಸಿದ್ದಾರೆ. ಕೂಡಲೇ ನಿಮ್ಮ ಮಾತುಗಳನ್ನು ಹಿಂಪಡೆದು ಕ್ಷಮೆಯಾಚಿಸಿ ನಿಮ್ಮ ಗೌರವವನ್ನು ಉಳಿಸಿಕೊಳ್ಳುವ ದೊಡ್ಡ ಮನಸು ಮಾಡಿ ಎಂದವರು ಅಗ್ರಹಿಸಿದ್ದಾರೆ.
ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾತನಾಡಿ, ಕಾನೂನು ರೀತಿಯಲ್ಲಿ ಮಾಹಿತಿ ಪಡೆದು ಭ್ರಷ್ಟಾಚಾರ ತಡೆಗಟ್ಟುವ ಪ್ರಯತ್ನದಲ್ಲಿರುವ ನಮ್ಮನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಹಗುರವಾಗಿ ಮಾತನಾಡಿದ್ದರೆಂದು ದೂರಿದರು. ನಿಮ್ಮ ಹಗುರವಾದ ಮಾತುಗಳು ನಿಮ್ಮ ಸ್ಥಾನಮಾನಕ್ಕೆ ಶೋಭೆ ತರುವಂತದ್ದಲ್ಲ, ಕೂಡಲೇ ನೀವಾಡಿದ ಮಾತುಗಳನ್ನು ಹಿಂಪಡೆದು ಪ್ರಾಮಾಣಿಕ ಮಾಹಿತಿ ಹಕ್ಕು ಕಾರ್ಯಕರ್ತರಲ್ಲಿ ಕ್ಷಮೆ ಯಾಚಿಸಿ ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವೇದಿಕೆಯ ಬೆಂಗಳೂರು ವಿಭಾಗದ ಮುಖಂಡ ಬಿ.ಶಿವಶಂಕರ್, ಜಿಲ್ಲಾಧ್ಯಕ್ಷ ಡಿ.ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಹನುಮಂತರಾಯಪ್ಪ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ಕರುನಾಡ ವಿಜಯಸೇನೆ ತಾಲ್ಲೂಕು ಅಧ್ಯಕ್ಷ ಎ.ನಂಜಪ್ಪ ಭಾಗವಹಿಸಿದ್ದರು.