ಭ್ರಷ್ಟಾಚಾರ ವಿರುದ್ದದ ಸಮರನಿರತ ‘ನಮೋ ಸಮಾಜ್’ ಮುಖ್ಯಸ್ಥರ ವಿರುದ್ಧ ಪಿತೂರಿ.. ಬಿಬಿಎಂಪಿ ಅಧಿಕಾರಿಗಳ ವಿರುದ್ದ ಎಫ್‌ಐಆರ್.. ಇಂಜಿನಿಯರ್‌ಗಳ ನಡೆ ಬಗ್ಗೆಯೇ ಅನುಮಾನ..
ಬೆಂಗಳೂರು; ಭ್ರಷ್ಟಾಚಾರ ವಿರುದ್ಧ ಸಮರ ಸಾರಿರುವ ‘ನಮೋ ಸಮಾಜ್’ ನೇತಾರ ಅನಿಲ್ ಕುಮಾರ್ ವಿರುದ್ಧ ಪಾತಕಿಗಳಿಂದ ಸಂಚು ನಡೆದಿದೆಯೇ? ಈ ರೀತಿಯ ಅನುಮಾನ ರಾಜ್ಯ ಪೊಲೀಸರನ್ನು ಕಾಡಿದೆ. ಬಿಬಿಎಂಪಿ ಅವಾಂತರ, ಕೆಆರ್‌ಐಡಿಎಲ್ ಕರ್ಮಕಾಂಡಗಳನ್ನು ಬಯಲಿಗೆಳೆಯುತ್ತಲೇ ಬಂದಿರುವ ಸಾಮಾಜಿಕ ಹೋರಾಟಗಾರರ ಕಾನೂನು ಹೋರಾಟವನ್ನು ಮೊಟಕುಗೊಳಿಸಲು ಪಾತಕ ಪಡೆ ಯತ್ನಿಸಿರುವ ಕಳವಳಕಾರಿ ವಿದ್ಯಮಾನಗಳ ಬಗ್ಗೆ ಗುಪ್ತದಳ ಮಾಹಿತಿ ಸಂಗ್ರಹಿಸಿದೆ. ಅದೇ ಹೊತ್ತಿಗೆ ಬೆಂಗಳೂರಿನ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗುವ ಮೂಲಕ ಈ ವಿದ್ಯಮಾನಗಳಿಗೆ ರೋಚಕತೆ ಬಂದಿದೆ.
ಏನಿದು ಪ್ರಕರಣ?
ರಾಜ್ಯದಲ್ಲಿ ಪಾರದರ್ಶಕ ಅಧಿನಿಯಮ ಜಾರಿಯಲ್ಲಿದ್ದರೂ ರಾಜ್ಯ ಸರ್ಕಾರವು ಸಾವಿರಾರು ಕೋಟಿ ರೂಪಾಯಿ ವೆಚ್ಚದ ಹಲವಾರು ಕಾಮಗಾರಿಗಳನ್ನು ನಿಯಮ ಬಾಹಿರವಾಗಿ ಕೆಆರ್‌ಐಡಿಎಲ್‌ಗೆ ವಹಿಸಿದೆ. ಈ ಭಾರೀ ಅಕ್ರಮವನ್ನು ಪತ್ತೆ ಮಾಡಿರುವ ‘ನಮೋ ಸಮಾಜ್’ನ ದಕ್ಷಿಣ ಭಾರತ ಪ್ರಮುಖ್ ಜಿ.ಆರ್.ಅನಿಲ್ ಕುಮಾರ್ ಅವರು, ಮಾಹಿತಿ ಹಕ್ಕು ಕಾಯ್ದೆಯಡಿ ದಾಖಲೆಗಳನ್ನು ಸಂಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆ ಮೂಲಕ ಕೆಆರ್‌ಐಡಿಎಲ್‌ಗೆ ಕೆಟಿಪಿಪಿ ಕಾಯ್ದೆ 4(ಜಿ)ಯಡಿ ಕಾಮಗಾರಿ ವಹಿಸುವ ಪ್ರಕ್ರಿಯೆಗೆ ತಡೆಯಾಜ್ಞೆ ತಂದಿದ್ದಾರೆ.
ಈ ನಡುವೆಯೂ ಬಿಬಿಎಂಪಿ ಅಧಿಕಾರಿಗಳು ಕಾಮಗಾರಿಗಳ ಗುತ್ತಿಗೆ ನೀಡುವಲ್ಲಿ ಮತ್ತಷ್ಟು ಅಕ್ರಮ ಎಸಗಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಬಿಬಿಎಂಪಿ ಕಾರ್ಯಪಾಲಕ ಇಂಜಿನಿಯರ್‌ಗೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿ ಮಾಹಿತಿ ಕೋರಿದ್ದಾರೆ. ಈ ಅರ್ಜಿ ವಿಚಾರ ಸೋರಿಕೆಯಾಗಿದೆ ಎನ್ನಲಾಗುತ್ತಿದ್ದು, ಕೆಲ ದಿನಗಳ ಹಿಂದೆ ಗುತ್ತಿಗೆದಾರರ ಕಡೆಯವರೆನ್ನಲಾದ ಸುಮಾರು 25 ಮಂದಿ ಚಾಮರಾಜಪೇಟೆಯಲ್ಲಿರುವ ಬಿಬಿಎಂಪಿ ಕಚೇರಿಗೆ ಲಗ್ಗೆ ಹಾಕಿ ಭೀತಿಯ ಸನ್ನಿವೇಶ ಸೃಷ್ಟಿಸಿದ್ದಾರೆನ್ನಲಾಗಿದೆ. ಅಷ್ಟೇ ಅಲ್ಲ, ಅರ್ಜಿದಾರ ಅನಿಲ್ ಕುಮಾರ್ ಅವರ ವಿಳಾಸ, ಫೋನ್ ನಂಬರ್ ಪಡೆದಿರುವ ಆ ಗುಂಪು ಅರ್ಜಿದಾರರನ್ನು ನೋಡಿಕೊಳ್ಳುವುದಾಗಿ ಹೇಳಿದ್ದಾರೆನ್ನಲಾಗಿದೆ. ಇದರಿಂದ ಬೆಚ್ಚಿಬಿದ್ದ ಬಿಬಿಎಂಪಿ ಸಿಬ್ಬಂದಿಯೊಬ್ಬರು ಅನಿಲ್ ಕುಮಾರ್ ಅವರಿಗೆ ಮಾಹಿತಿ ರವಾನಿಸಿದ್ದಾರೆ.
ಈ ನಡುವೆ ಬಿಬಿಎಂಪಿ ಅಧಿಕಾರಿಗಳ ಕುಮ್ಮಕ್ಕಿನಲ್ಲಿ ತಮ್ಮ ವಿರುದ್ದ ಪಾತಕಿಗಳು ಪಿತೂರಿ ನಡೆಸಿದ್ದು ತಮಗೆ ಜೀವಭಯದ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ ಎಂದು ಅನಿಲ್ ಕುಮಾರ್ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬೊಟ್ಟುಮಾಡಿದ್ದಾರೆ. ಈ ದೂರನ್ನಾಧರಿಸಿ ಎಫ್‌ಐಆರ್ ದಾಖಲಿಸಿರುವ ಕೆಂಪೇಗೌಡನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ.. ‘ನಮೋ ಸಮಾಜ್’ ಮುಖ್ಯಸ್ಥರ ವಿರುದ್ಧ ಸಂಚು; ಅಮಿತ್ ಷಾ ಕಳವಳ
ಬಿಬಿಎಂಪಿ ಇಂಜಿನಿಯರ್ ನಡೆ ಬಗ್ಗೆ ಅನುಮಾನ
ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅನಿಲ್ ಕುಮಾರ್ ಅವರು ಬಿಬಿಎಂಪಿ ಎಕ್ಸಿಕ್ಯುಟಿವ್ ಇಂಜಿನಿಯರ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ತಾವು ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ್ದು ಮಾಹಿತಿ ಒದಗಿಸಲು ಅಧಿಕಾರಿಗಳು ಹಿಂದೆಟು ಹಾಕಿದ್ದಾರೆ. ಅಷ್ಟೇ ಅಲ್ಲ, ಅರ್ಜಿ ವಿಚಾರವನ್ನು ಗುತ್ತಿಗೆದಾರರಿಗೆ ತಿಳಿಸಿ ತಮ್ಮ ವಿರುದ್ದ ಪಿತೂರಿ ನಡೆಸಿದ್ದಾರೆದು ಆರೋಪಿಸಿದ್ದಾರೆ.
ಅನಿಲ್ ಕುಮಾರ್ ಮಾಡಿರುವ ಈ ಅರೋಪಗಳನ್ನು ದೃಢಪಡಿಸಿರುವ ಪೊಲೀಸ್ ಇನ್‌ಸ್ಪೆಕ್ಟರ್ ಚೇತನ್ ಕುಮಾರ್ ಅವರು, ಸೂಕ್ತ ತನಿಖೆಗೆ ಕ್ರಮವಹಿಸಿರುವುದಾಗಿ ತಿಳಿಸಿದ್ದಾರೆ.