ಬೆಂಗಳೂರು: ಫೆಬ್ರವರಿ 1ರಿಂದ 9ನೇ ತರಗತಿ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪೂರ್ಣ ಪ್ರಮಾಣದಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗುರುವಾರ ತಿಳಿಸಿದ್ದಾರೆ.
ಕೊರೋನಾ ಸಂಕಟ ಕಾರಣದಿಂದಾಗಿ ಪ್ರಸಕ್ತ ಶೈಕ್ಷಣಿಕ ವರ್ಷ ತರಗತಿ ಇಲ್ಲದ ವರ್ಷವಾಗಿ ಪರಿಣಮಿಸಿದೆ. ಈ ನಡುವೆ ವರ್ಷ ಅಂತ್ಯದ ಸಂದರ್ಭದಲ್ಲಾದರೂ ತರಗತಿ ಆರಂಭದ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ, ಕೆಲವು ದಿನಗಳ ಹಿಂದಷ್ಟೇ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಪದವಿ ತರಗತಿಗಳು ಆರಂಭಗೊಂಡಿದ್ದವು.
ಇದೀಗ ರಾಜ್ಯದಲ್ಲಿ ಫೆಬ್ರವರಿ 1ರಿಂದ 9ನೇ ತರಗತಿ, ಪ್ರಥಮ ಪಿಯುಸಿ ತರಗತಿಗಳನ್ನೂ ಆರಂಭ ಮಾಡಲು ತೀರ್ಮಾನಿಸಿದ್ದು, 9, 10, 11 ಮತ್ತು 12ನೇ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಪುನರಾರಂಭವಾಗಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಗುರುವಾರ ತಿಳಿಸಿದ್ದಾರೆ.
6 ರಿಂದ 8ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಸ್ವಲ್ಪ ದಿನ ಕಾದು ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ. 1 ರಿಂದ 5ನೇ ತರಗತಿಗಳನ್ನು ಆರಂಭಿಸುವ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನವಿಲ್ಲ. ಉಳಿದ ತರಗತಿಗಳನ್ನು ಆರಂಭಿಸುವ ಬಗ್ಗೆ ಮುಂದೆ ನಿರ್ಧರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.