ದೊಡ್ಡಬಳ್ಳಾಪುರ: ಕೇವಲ ರಾಜಕೀಯ ಲಾಭಕ್ಕಾಗಿ ಬಿಜೆಪಿ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿದೆ. ಇದರಿಂದ ರೈತರಿಗೆ ನಷ್ಟವೇ ಹೊರೆತು ಲಾಭವಿಲ್ಲ ಎಂದು ಮಾಜಿ ಸಚಿವ ಕೃಷ್ಣಭೈರೇಗೌಡ ಹೇಳಿದರು.
ತಾಲ್ಲೂಕಿನ ಮೆಣಸಿ ಕಾಲೋನಿಯಲ್ಲಿ ನಿರ್ಮಾಣ ಮಾಡಲಾಗಿರುವ ನೂತನ ಹಾಲು ಉತ್ಪಾದಕ ಸಹಕಾರಿ ಸಂಘದ ಕಟ್ಟಡ ಉದ್ಘಾಟನೆ ನೆರವೇರಿಸಿದ ಅವರು, ದೇಶಾದ್ಯಂತ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಕನಿಷ್ಠ ರೈತರ ಸಮಸ್ಯೆ ಕೇಳಲು ಕೂಡ ಪ್ರಧಾನಿ ನರೇಂದ್ರ ಮೋದಿಗೆ ಸೌಜನ್ಯವಿಲ್ಲ ಎಂದು ದೂರಿದರು.
ಗೋಹತ್ಯೆ ನಿಷೇಧ ಕಾಯ್ದೆ ಕೇವಲ ರಾಜಕೀಯ ಲಾಭಕ್ಕಾಗಿ ಮತ್ತು ಸಮಾಜದಲ್ಲಿನ ಜನರನ್ನು ಒಡೆದು ಆಳುವ ನೀತಿ ಎದ್ದು ಕಾಣುತ್ತಿದೆ. ರೈತರ ಬಗ್ಗೆ, ಗೋವುಗಳ ಬಗ್ಗೆ ಕಾಳಜಿ ಇದ್ದರೆ ಪ್ರತಿ ಹೋಬಳಿ, ತಾಲ್ಲೂಕು, ಜಿಲ್ಲಾ ಕೇಂದ್ರಗಳಲ್ಲಿ ಗೋಶಾಲೆಗಳನ್ನು ಸರ್ಕಾರ ತೆರೆಯಲಿ. ರೈತರಿಗೆ ಬೇಡವಾದ ಜಾನುವಾರುಗಳನ್ನು ಗೋಶಾಲೆಗೆ ಬಿಡುತ್ತಾರೆ. ರೈತರು ಬಿಡುವ ಜಾನುವಾರುಗಳಿಗೆ ಸರ್ಕಾರವೇ ಹಣ ನೀಡಲಿ. ಈ ಮೂಲಕ ರೈತರ ನೆರವಿಗೆ ಬರಲಿ ನಾವು ಕೂಡ ಸಹಕಾರ ನೀಡುತ್ತೇವೆ. ರೈತ ಸಮುದಾಯ ಈಗಾಗಲೇ ಐಸಿಯುನಲ್ಲಿದೆ. ಮುಂದಿನ ದಿನಗಳಲ್ಲಿ ಸಹಕಾರಿ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ಆಶ್ಚರ್ಯವಿಲ್ಲ. ಸದ್ಯಕ್ಕೆ ಹಸುಗಳನ್ನು ಸಾಕಿ ಡೇರಿಗಳಿಗೆ ಹಾಲನ್ನು ಹಾಕಿ ಬಡ ರೈತರು ಜೀವನ ನಡೆಸುತ್ತಿದ್ದಾರೆ. ರೈತರು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಡೇರಿಗಳ ಪರಿಸ್ಥಿತಿಯೂ ಹೇಳತೀರದಂತಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೆಎಂಎಫ್ ಹಾಗೂ ಬಮೂಲ್ ನಿರ್ದೇಶಕ ಬಿ.ಸಿ ಆನಂದ್ ಕುಮಾರ್ ಮಾತನಾಡಿ ಕರೊನಾ ಹಾಗೂ ಲಾಕ್ ಡೌನ್ ಸಂಧರ್ಬದಲ್ಲಿ ಬಮೂಲ್ ವ್ಯಾಪ್ತಿಯಲ್ಲಿ ರೈತರಿಂದ ಖರೀದಿಸುವ ಹಾಲಿನ ದರವನ್ನು ಕಡಿತ ಗೊಳಿಸಲಾಗಿತ್ತು. ಇದೀಗ ಬಮೂಲ್ ಚೇತರಿಕೆ ಕಾಣುತ್ತಿದ್ದು ಫೆ.೧ ರಿಂದ ಪ್ರತಿ ಲೀಟರ್ ಹಾಲಿಗೆ ೨ ರೂ. ಏರಿಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಖರ್ಚು ವೆಚ್ಚಗಳನ್ನು ಸರಿದೂಗಿಸಿ ಮತ್ತಷ್ಟು ಏರಿಕೆ ಮಾಡಲಾಗುವುದು. ರೈತರು ಹೈನುಗಾರಿಕೆ ಯಲ್ಲಿ ಹೆಚ್ಚು ತೊಡಗಿಸಿಕೊಂಡರೆ ಬಮೂಲ್ ಅವರ ಬೆನ್ನಿಗೆ ನಿಂತಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಬಮೂಲ್ ಕಚೇರಿ ಉಪ ವ್ಯವಸ್ಥಾಪಕ ಗೋಪಾಲಕೃಷ್ಣ, ಇಓ ಅಶ್ವತ್ಥ್, ಪಿಎಲ್ ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಪುಟ್ಟರಾಜು, ಮುಖಂಡರಾದ ರಾಮಕೃಷ್ಣ ಮತ್ತಿತ್ತರಿದ್ದರು.