ಮಂಗಳೂರು: ಉಪಸಭಾಪತಿ ಧರ್ಮೇಗೌಡ ಆತ್ಮಹತ್ಯೆ ಪ್ರಕರಣಕ್ಕೆ ಸರ್ಕಾರವೇ ಹೊಣೆಯೇ? ಹೀಗೆಂದು ನೇರ ಆರೋಪ ಮಾಡಿದೆ ಕಾಂಗ್ರೆಸ್ ಪಕ್ಷ.
ವಿಧಾನ ಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ಘಟನೆ ಹಾಗೂ ಧರ್ಮೇಗೌಡರ ಆತ್ಮಹತ್ಯೆಗಳಿಗೆ ರಾಜ್ಯಸರ್ಕಾರವೇ ನೇರ ಹೊಣೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾನೂನು– ನಿಯಮಾವಳಿ ಉಲ್ಲಂಘಿಸಿ ಸಭಾಧ್ಯಕ್ಷರನ್ನು ಪದಚ್ಯುತಿಗೊಳಿಸುವ ಪ್ರಯತ್ನ ನಡೆದಿದೆ. ಉಪಸಭಾಪತಿಗಳಿಗೆ ಮಧ್ಯರಾತ್ರಿ ಕರೆ ಮಾಡಿ, ತರಾತುರಿಯಲ್ಲೇ ಸಭಾಪತಿಗಳ ಪೀಠವನ್ನು ಅಲಂಕರಿಸುವಂತೆ ಹೇಳಿದ್ದು ಯಾಕೆ?’ ಎಂದು ಪ್ರಶ್ನಿಸಿದರು ಈ ಬೆಳವಣಿಗೆ ನಂತರದ ವಿದ್ಯಮಾನಗಳು ಧರ್ಮೇಗೌಡರ ಪರಿಸ್ಥಿತಿಗೆ ಕಾರಣವಾಯಿತು ಎಂದವರು ವಿಶ್ಲೇಷಣೆ ಮಾಡಿದರು.

ಸಭಾಪತಿಗಳ ಅನುಮತಿ ಇಲ್ಲದೇ ಸದನಕ್ಕೂ ಯಾರೂ ಕಾಲಿಡುವುದು ಸರಿಯಾದ ಕ್ರಮವಲ್ಲ. ಹೀಗಿರುವಾಗ ಉಪಮುಖ್ಯಮಂತ್ರಿ ಮತ್ತು ಕಾನೂನು ಸಚಿವರೇ ನಿಯಮ ಉಲ್ಲಂಘಿಸಿದರು ಎಂದು ದೂರಿದ ಸಲೀಂ ಅಹಮದ್, ಪರಿಷತ್ ಘಟನೆಯಲ್ಲಿ ನಾವು ಕಾಂಗ್ರೆಸ್ ಸದಸ್ಯರನ್ನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ, ಈ ಬೆಳವಣಿಗೆಗೆ ಸರ್ಕಾರವೇ ನೇರ ಹೊಣೆ ಎಂದು ಅವರು ಪುನರುಚ್ಚರಿಸಿದರು.