ಬೆಳಗಾವಿ: ಗೋಕಾಕ್ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ರಚನೆ ಕುರಿತಂತೆ ಮತ್ತೆ ಕೂಗು ಪ್ರತಿಧ್ವನಿಸಿದೆ. ಬೆಳಗಾವಿಯಲ್ಲಿಂದು ಈ ಕುರಿತಂತೆ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದೆ.
ಗೋಕಾಕ್ ನ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿನಿಯೋಗವೊಂದು ಸಚಿವ ರಮೇಶ್ ಜಾರಕಿಹೋಳಿ ಅವರನ್ನು ಭೆಟಿಯಾಗಿ ಅಚ್ಚರಿಯ ಬೆಳವಣಿಗೆಗೆ ಮುನ್ನುಡಿ ಬರೆಯಿತು.
ಗೋಕಾಕ್‌ನಲ್ಲಿರುವ ಸಚಿವರ ನಿವಾಸಕ್ಕೆ ಭೇಟಿನೋಡಿದ ಸ್ವಾಮೀಜಿ ಹಾಗೂ ಗಣ್ಯರನ್ನೊಳಗೊಂಡ ನಿಯೋಗ ನೂತನ ಜಿಲ್ಲೆ ರಚನೆಗೆ ಅಗತ್ಯ ಕ್ರಮವಹಿಸುವಂತೆ ಒತ್ತಯಿಸಿತು.
ಈ ಭೇಟಿ, ಸಮಾಲೋಚನೆ ನಂತರ ಸುದ್ದಿಗಾರರೊಂದಿಗೆ ಮಾಹಿತಿ ಹಂಚಿಕೊಂಡ ಸಚಿವ ರಮೇಶ್ ಜಾರಕಿಹೋಳಿ ನೂತನ ಜಿಲ್ಲೆಗಳ ರಚನೆಯ ಆಗ್ರಹಕ್ಕೆ ಧ್ವನಿಗೂಡಿಸಿದರು.
ಸಿದ್ಧರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ಗೋಕಾಕ್- ಚಿಕ್ಕೋಡಿ ಜಿಲ್ಲೆ ರಚನೆ ಬಗ್ಗೆ ನಿರ್ಣಯ ಮಾಡಲಾಗಿತ್ತು. ಬೈಲಹೊಂಗಲದವರು ನಮಗೂ ಪ್ರತ್ಯೇಕ ಜಿಲ್ಲೆ ಕೊಡಿ ಅಂತ ಹೇಳಿದ್ದರಿಂದ ಈ ವಿಚಾರ ಅಷ್ಟಕ್ಕೆ ನಿಂತಿದೆ. ಹೊಸ ತಾಲೂಕು ರಚನೆ ಮಾಡಿ. ಆ ನಂತರ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆ ಮಾಡಲು ಹೇಳಿದ್ದೇನೆ. ಇದೇ ತಾಂತ್ರಿಕ ಕಾರಣದಿಂದ ಗೋಕಾಕ್ ಜಿಲ್ಲೆಯಾಗುವುದು ಬಾಕಿ ಉಳಿದಿದೆ ಎಂದು ಸಚಿವ ಜಾರಕಿಹೊಳಿ ಹೇಳಿದರು.
ಕೋವಿಡ್ ಹಾಗೂ ಆರ್ಥಿಕ ಕಾರಣದಿಂದ ತಾಲೂಕು ರಚನೆ ಬಾಕಿ ಉಳಿದಿದೆ ಎಂದ ಅವರು, ಬಳ್ಳಾರಿ ಜಿಲ್ಲೆ ವಿಭನೆ ಏಕೆ ಆಯ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ಮಾದರಿಯಲ್ಲಿ ಗೋಕಾಕ್, ಚಿಕ್ಕೋಡಿ ಜಿಲ್ಲೆ ರಚನೆ ಮಾಡುವಂತೆ ಆಗ್ರಹಿಸಲು ಬಜೆಟ್ ಮುಗಿದ ನಂತರ ಸಿಎಂ ಬಳಿಗೆ ನಿಯೋಗ ತೆರಳಲಾಗುವುದು ಎಂದು ಪ್ರಕಟಿಸಿದರು.
ಐದಾರು ತಿಂಗಳಲ್ಲಿ ಗೋಕಾಕ್ ಪ್ರತ್ಯೇಕ ಜಿಲ್ಲೆ ರಚನೆಗೆ ಸರ್ಕಾರ ಕ್ರಮ ಕೈಗೊಳ್ಳಬಹುದೆಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.