ಮಂಗಳೂರು: ಬಂದರು ನಗರಿ ಮಂಗಳೂರಿನಲ್ಲಿ ಪ್ರಚೋದನಕಾರಿ ಬರಹ ಪೊಲೀಸ್ ತನಿಖೆಗೂ ಸವಾಲೆಂಬಂತಿದೆ. ಈ ಬರಹದ ಕೃತ್ಯದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ತಪ್ಪಿತಸ್ತರನ್ನು ಕೂಡಲೇ ಬಂಧಿಸಬೇಕೆಂದು ಮಾಜಿ ಸಚಿವ ಯು.ಟಿ.ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಡೆ ಬರಹದ ಕೃತ್ಯವನ್ನು ಖಂಡಿಸಿದರು. ಇದನ್ನು ಯಾರೇ ಆದರೂ ಸಹಿಸಲು ಯಾವುದೇ ಕಾರಣಕ್ಕೂ ಸಾದ್ಯವಿಲ್ಲ ಎಂದ ಯುಟಿ ಖಾದರ್, ತಪ್ಪಿತಸ್ಥರನ್ನು ಪತ್ತೆ ಹಚ್ಚುವುದು ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿದೆ. ಇವರಿಗೆ ಬೆಂಬಲವಾಗಿರುವರನ್ನೂ ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ ಎಂದರು.
ಗುಪ್ತಚರ ಇಲಾಖೆ ಏನು ಮಾಡ್ತಿದೆ. ಮತ್ತೆ ಮತ್ತೆ ಹೀಗ್ಯಾಕೆ ಅಗ್ತಿದೆ ಎಂದು ಪ್ರಶ್ನಿಸಿದ ಖಾದರ್, ವಿವಾದಿತ ಬರಹದ ಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಅಂಥವರನ್ನ ಬೇರೆ ದೇಶಕ್ಕೆ ಬಿಟ್ಟು ಬರಬೇಕು. ಅಂಥವರಿಗೆ ನಮ್ಮ ಮಣ್ಣಿನಲ್ಲಿ ಇರಲು ಯಾವುದೇ ಹಕ್ಕಿಲ್ಲ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವತ್ತು ಕಾನೂನಿಗೆ ಹೆದರದ ಪರಿಸ್ಥಿತಿ ಇದೆ. ಗೋಡೆ ಬರಹ, ಇನ್ನಿತರ ವಿಚಾರಗಳು ಕಾಂಗ್ರೆಸ್ ಸರ್ಕಾರ ಇದ್ದಾಗ ಇರಲಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಾಜ ದ್ರೋಹಿ ಶಕ್ತಿಗಳಿಗೆ ಧೈರ್ಯ ಬಂದಿದೆ. ಇದಕ್ಕೆ ಜಿಲ್ಲೆಯ ಎಂಪಿ, ಎಂಎಲ್ಎಗಳು ಉತ್ತರ ಕೊಡಬೇಕು ಎಂದು ಯು.ಟಿ.ಖಾದರ್ ಹೇಳಿದರು.
ಆರೋಪಿಗಳನ್ನು 15 ದಿನಗಳಲ್ಲಿ ಬಂಧಿಸದಿದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.