ಬೆಂಗಳೂರು: ವಿದ್ಯುತ್ ಖರೀದಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಭಾರೀ ಹಗರಣ ನಡೆದಿದೆಯೇ? ಈ ಕುರಿತ ಆಮ್ ಆದ್ಮಿ ಪಕ್ಷದ ನಾಯಕರು ಮೂರು ಪ್ರಶ್ನೆಗಳನ್ನು ಮುಂದಿಟ್ಟು ಸಿಎಂ ಯಡಿಯೂರಪ್ಪ ಅವರನ್ನು ಕೆಣಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಆಮ್ ಆದ್ಮಿ ಪಕ್ಷದ ನಾಯಕ ಪೃಥ್ವಿ ರೆಡ್ಡಿ, ಅದಾನಿಯ ಉಡುಪಿ ಪವರ್‌ನಿಂದ 2018 ರಿಂದ 2020 ರವರೆಗೆ ಪ್ರತಿ ಕಿಲೋವ್ಯಾಟ್‌ಗೆ 4.78 ರೂ.ನಿಂದ 6.80 ರೂ.ಗೆ ಖರೀದಿ ಬೆಲೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಅನುಮೋದನೆ ನೀಡಿದೆ ಎಂದು ಆರೋಪಿಸಿದ್ದಾರೆ.
ವಿದ್ಯುತ್ ಖರೀದಿಯಲ್ಲಿನ ಭ್ರಷ್ಟಾಚಾರ, ಅಧಿಕಾರದ ದುರ್ಬಳಕೆಯಿಂದ ಆಗಿರುವ ಈ ನಷ್ಟವನ್ನು ಕರ್ನಾಟಕದ ಜನರ ಮೂಲಕ ಹೇಗೆ ವಸೂಲಿ ಮಾಡಲಾಗುತ್ತಿದೆ ಎಂಬ ಬಗ್ಗೆ ಅವರು ದಾಖಲೆಗಳನ್ನೂ ನೀಡಿದ್ದಾರೆ. ಈ ಹಗರಣ ಸಂಬಂಧ ಇಂಧನ ಖಾತೆಯನ್ನು ಹೊಂದಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ 3 ಪ್ರಶ್ನೆಗಳನ್ನು ಆಪ್ ನಾಯಕ ಪೃಥ್ವಿ ರೆಡ್ಡಿ, ಮುಂದಿಟ್ಟಿದ್ದಾರೆ.
ಮೂರು ಪ್ರಶ್ನೆಗಳ ಸವಾಲು
ಅದಾನಿಯ ಉಡುಪಿ ಪವರ್‌ನಿಂದ 2018 ರಿಂದ 2020 ರವರೆಗೆ ಪ್ರತಿ ಕಿಲೋವ್ಯಾಟ್‌ಗೆ 4.78 ರೂ.ನಿಂದ 6.80 ರೂ.ಗೆ ಖರೀದಿ ಬೆಲೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಅನುಮೋದನೆ ನೀಡಿರುವುದು ನಿಜವಲ್ಲವೇ?
ವಿದ್ಯುತ್ ಸುಂಕವನ್ನು ಶೇ 6ರಷ್ಟು ಹೆಚ್ಚಿಸಿ ಅದನ್ನು ಅದಾನಿಯ ಉಡುಪಿ ಪವರ್‌ಗೆ ವಿದ್ಯುತ್ ಪಾವತಿಸುವುದು ನಿಜವಲ್ಲವೇ? ಒಬ್ಬ ವ್ಯಕ್ತಿಯ ಲಾಭಕ್ಕೆ 6 ಕೋಟಿ ಜನರ ಮೇಲೆ ಹೊರೆ ಏಕೆ?
ಈ ವರ್ಷ ಏಪ್ರಿಲ್’ನಿಂದ ಸೆಪ್ಟೆಂಬರ್’ವರೆಗೆ ಕರ್ನಾಟಕದ ನಾಗರಿಕರು ಉದ್ಯೋಗ ಮತ್ತು ಆದಾಯ ನಷ್ಟವನ್ನು ಅನುಭವಿಸುತ್ತಿರುವಾಗ, ಅದಾನಿ ಪವರ್ ಬೆಂಸ್ಕಾಂಗೆ ಸರಬರಾಜು ಮಾಡಿರುವ ವಿದ್ಯುತ್‌ನಿಂದ ಸುಮಾರು 2,260 ಕೋಟಿಯಷ್ಟು ಭಾರಿ ಲಾಭ ಗಳಿಸುವ ನಿರೀಕ್ಷೆಯಿದೆ?
ನೀವು 2 ವರ್ಷಗಳಲ್ಲಿ 42 +% ಹೆಚ್ಚು ಹಣ ನೀಡಿದ್ದೀರಿ? ಇದು ನಿಜವಲ್ಲವೇ ಎಂದು ಪೃಥ್ವಿ ರೆಡ್ಡಿ ಪ್ರಶ್ನಿಸಿದ್ದಾರೆ. 6 ಕೋಟಿ ಜನರು ಪರವಾಗಿ ತಾವು ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಅವರು ಆಗ್ರಹಿಸಿದ್ದಾರೆ.