ಬೆಂಗಳೂರು: ‘ನಮ್ಮ ಮತ- ನಮ್ಮ ಹಕ್ಕು’ ಘೋಷಣೆಯಡಿ, ಮತಗಳ್ಳತನ ವಿರುದ್ಧದ ರಾಹುಲ್ ಗಾಂಧಿಯವರ ಹೋರಾಟಕ್ಕೆ ಕೈ ಜೋಡಿಸಿರುವ ಪ್ರದೇಶ ಕಾಂಗ್ರೆಸ್, ಕರ್ನಾಟಕದಲ್ಲಿ 1,12,41,000 ಸಹಿ ಸಂಗ್ರಹ ಮಾಡಿದೆ.
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ತಿಯಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಉಪಮುಖ್ಯಮಂತ್ರಿಯೂ ಆದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ನಡೆದ ವೋಟ್ ಚೋರಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದರು.
ಪ್ರಜಾಪ್ರಭುತ್ವದ ಶಕ್ತಿಯಾದ ಮತವನ್ನು ಕದಿಯುವ ಪ್ರಯತ್ನಗಳ ವಿರುದ್ಧ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಕರ್ನಾಟಕದಿಂದಲೇ ಧ್ವನಿ ಎತ್ತಿದ್ದಾರೆ. ಮಹದೇವಪುರ, ಆಳಂದ ಮಾತ್ರವಲ್ಲದೆ ವ್ಯಾಪಕವಾಗಿ ಹೊರ ರಾಜ್ಯಗಳಲ್ಲಿಯೂ ಮತಗಳ್ಳತನ ಪ್ರಕರಣಗಳು ನಡೆದಿರುವ ಬಗ್ಗೆ ಸಾಕ್ಷಿಸಮೇತ ಮಾಹಿತಿ ನೀಡಿ, ಮತದಾರರ ಹಕ್ಕುಗಳ ಉಳಿವಿಗಾಗಿ ಹೋರಾಟ ಮುಂದುವರೆಸಿದ್ದಾರೆ ಎಂದರು.
ಈ ಹಿಂದೆ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡು ಯಾವ ರೀತಿಯಲ್ಲಿ ಮತದಾರರ ಮಾಹಿತಿ ಕಳ್ಳತನ ಮಾಡಲಾಯಿತು ಎಂಬುದು ರಾಜ್ಯದ ಜನರು ಗಮನಿಸಿದ್ದಾರೆ. ಆಳಂದ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಗೆ ಮುನ್ನ 6,018 ಮತಗಳನ್ನು ಅಳಿಸಲು ಪ್ರಯತ್ನ ನಡೆದಿತ್ತು. ಇದೇ ರೀತಿ ರಾಜಸ್ಥಾನ, ಮಹಾರಾಷ್ಟ್ರ ಮತ್ತು ಹರಿಯಾಣ ಸೇರಿದಂತೆ ಹಲವಾರು ಇತರ ರಾಜ್ಯಗಳಲ್ಲಿ ಅಕ್ರಮಗಳು ಕಂಡುಬಂದಿವೆ ಎಂದು ಡಿಕೆಶಿ ವಿವರಿಸಿದರು.
ಮತ ಕಳ್ಳತನ ತಡೆದು ಪ್ರಜಾಪ್ರಭುತ್ವ ಉಳಿಸಲು ಕರ್ನಾಟಕದಿಂದ ಧ್ವನಿ ಎತ್ತಿರುವ ರಾಹುಲ್ ಗಾಂಧಿ ಅವರಿಗೆ ಕಾಂಗ್ರೆಸ್ ಪಕ್ಷ ಸೇರಿದಂತೆ ಎಲ್ಲಾ ಸಾರ್ವಜನಿಕರು ಪಕ್ಷಬೇಧ ಮರೆತು ಪ್ರತಿಯೊಬ್ಬರು ಸಹಕಾರ ನೀಡಬೇಕಿದೆ. ಮತದಾನದ ಹಕ್ಕಿನ ರಕ್ಷಣೆಗಾಗಿ ಸಹಿ ಸಂಗ್ರಹ ಅಭಿಯಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಗೂ ನಾನು ಕೂಡ ಪಾಲ್ಗೊಂಡಿದ್ದೇವೆ. ವೋಟ್ ಚೋರಿ ವಿರುದ್ಧದ ಸಹಿ ಸಂಗ್ರಹ ಅಭಿಯಾನದಲ್ಲಿ ರಾಜ್ಯದಲ್ಲಿ ಇದುವರೆಗೆ 1,12,41,000 ಮತದಾರರು ಸಹಿ ಮಾಡಿ ಅಭಿಯಾನಕ್ಕೆ ಕೈಜೋಡಿಸಿದ್ದಾರೆ ಎಂದು ತಿಳಿಸಿದರು
ಸಹಿ ಸಂಗ್ರಹಕ್ಕೆ ಸಂಬಂಧಿಸಿದ ದಾಖಲೆಗಳನ್ನು 10ನೇ ತಾರೀಖಿನಂದು ದೆಹಲಿಯ ಎಐಸಿಸಿ ಕಚೇರಿಗೆ ತೆಗೆದುಕೊಂಡು ಹೋಗಿ ಮಾಹಿತಿ ನೀಡಲಾಗುವುದು ಎಂದ ಅವರು, ಮತಗಳ್ಳತನ ವಿರುದ್ಧ ರಾಮ್‌ಲೀಲಾ ಮೈದಾನದಲ್ಲಿ ಬೃಹತ್ ಸಭೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲು ಬ್ಯಾಲಟ್ ಪೇಪರ್ ಬಳಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಮತಗಳ್ಳತನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದರು.



























































