ಬೆಂಗಳೂರು:‘ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಅಧಿಕಾರಿಗಳ ತನಿಖೆ ಹಿಂದೆ ಷಡ್ಯಂತ್ರವಿದೆ. ಗೃಹ ಇಲಾಖೆ ಅಧಿಕಾರಿಗಳ ನಡೆ ದೂರು ನೀಡಿರುವ ಗುತ್ತಿಗೆದಾರರ ಸಂಘವನ್ನು ಬೆದರಿಸುವ ಹಾಗೂ ಭ್ರಷ್ಟ ಸಚಿವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿವೆ ಎಂಬುದು ಸ್ಪಷ್ಟಪಡಿಸುತ್ತಿವೆ’ ಎಂದು ಕೆಪಿಸಿಸಿ ವಕ್ತಾರರಾದ ರಮೇಶ್ ಬಾಬು ಅವರು ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಕಾನೂನು ವಿಭಾಗದ ಉಪಾಧ್ಯಕ್ಷ ದಿವಾಕರ್, ಮಾಧ್ಯಮ ವಿಭಾಗದ ಸಂಯೋಜಕ ರಾಮಚಂದ್ರಪ್ಪ, ಜಿ.ಸಿ ರಾಜುಗೌಡ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಮೇಶ್ ಬಾಬು, ‘40% ಕಮಿಷನ್ ವಿಚಾರವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಪತ್ರ ಬರೆದು ಸುಮಾರು ಒಂದು ವರ್ಷ ಪೂರ್ಣಗೊಂಡಿದ್ದು, ಈಗ ಅದರ ವಿಚಾರಣೆಗೆ ಮುಂದಾಗಿದ್ದಾರೆ. ಈ ಪ್ರಕರಣದ ವಿಚಾರಣೆ ಮಾಡಲು ಬಂದ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ದಾಖಲೆ ಸಲ್ಲಿಸುವಂತೆ ಕೇವಲ ಮೌಖಿಕ ರೂಪದಲ್ಲಿ ಸೂಚನೆ ನೀಡಿರುವುದು ಏಕ? ಲಿಖಿತ ರೂಪದಲ್ಲಿ ನೊಟೀಸ್ ಅನ್ನು ನೀಡಿಲ್ಲ ಏಕೆ? ಕೆಂಪಣ್ಣನವರು ದೂರು ನೀಡಿದ್ದು, ಪ್ರಧಾನಿ ಕಾರ್ಯಾಲಯಕ್ಕೆ, ಆದರೆ ಗೃಹ ಇಲಾಖೆ ತನಿಖೆಗೆ ಮುಂದಾಗಿದೆ. ಪ್ರಧಾನಿಕಾರ್ಯಾಲಯದಿಂದ ತನಿಖೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ಸೂಚನೆ ರವಾನೆಯಾಗಿದೆಯೇ? ಈ ಬಗ್ಗೆ ಪ್ರಧಾನಿ ಕಾರ್ಯಾಲಯವಾಗಲಿ, ಗೃಹ Popularity ಯಾಕೆ ಸ್ಪಷ್ಟನೆ ನೀಡಿಲ್ಲ? ಎಂದು ಪ್ರಶ್ನಿಸಿದರು.
ಗೃಹ ಸಚಿವಾಲಯದ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರನ್ನು ಸಂಪರ್ಕಿಸಿ ಈ ಪ್ರಕರಣದ ಮಾಹಿತಿ ಕೋರಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ, ಗೃಹ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ವಿಚಾರ ತಿಳಿದಿದೆ ನಾವು ಮತ್ತೆ ಬರುವುದಾಗಿ ಹೇಳಿ ಹೊರಟಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗೃಹ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಯದಂತೆ ಈ ಪ್ರಕರಣದ ಸಾಕ್ಷ್ಯಗಳನ್ನು ಕಲೆಹಾಕಲು ಪ್ರಯತ್ನಿಸಿದ್ದು ಯಾಕೆ? ಎಂದರು.
ಕೇಂದ್ರದ ಯಾವುದೇ ಇಲಾಖೆ ರಾಜ್ಯದ ಪ್ರಕರಣದಲ್ಲಿ ತನಿಖೆ ಮಾಡಬೇಕಾದರೆ, ಅಥವಾ ಮಾಹಿತಿ ಪಡೆಯಬೇಕಾದರೆ ಲಿಖಿತ ರೂಪದಲ್ಲಿ ನೋಟೀಸ್ ನೀಡಬೇಕು. ಆದರೆ ಸಂಘಕ್ಕೆ ಲಿಖಿತ ರೂಪದಲ್ಲಿ ನೊಟೀಸ್ ಯಾಕೆ ನೀಡಿಲ್ಲ? ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದು, ಗುತ್ತಿಗೆದಾರರ ಸಂಘಕ್ಕೆ ಪ್ರಧಾನಿ ಕಾರ್ಯಾಲಯದಿಂದ ಯಾವುದೇ ಸೂಚನೆ ಬಂದಿಲ್ಲ. ಗುತ್ತಿಗೆದಾರರ ಸಂಘವನ್ನು ಹೆದರಿಲು ಪ್ರಯತ್ನಿಸುತ್ತಿದೆಯೇ ಅಥವಾ ಬೇರೆ ಯಾವುದಾದರು ಸಂದೇಶವನ್ನು ರವಾನಿಸಲು ಗೃಹ ಇಲಾಖೆ ಪ್ರಯತ್ನಿಸುತ್ತಿದೆಯೇ ಎಂಬುದನ್ನು ಗೃಹ ಇಲಾಖೆಯ ಸ್ಪಷ್ಟಪಡಿಸಬೇಕು ಎಂದು ರಮೇಶ್ ಬಾಬು ಆಗ್ರಹಿಸಿದರು.
ಗೃಹ ಇಲಾಖೆ ಅಡಿಯಲ್ಲಿ ಬರುವ ಸಿಬಿಐ, ಇಡಿ ಅಥವಾ ಇತರೆ ತನಿಖಾ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಇಂದು ಗುತ್ತಿಗೆದಾರರ ಸಂಘಕ್ಕೆ ಮೌಖಿಕವಾಗಿ ಸೂಚನೆ ನೀಡಿ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಂತರ ಮಾಧ್ಯಮಗಳಿಗೆ ಹೆದರಿ ಪಲಾಯನ ಮಾಡಲಾಗಿದೆ ಎಂದರು.
ಕೆಂಪಣ್ಣನವರು ಕಳೆದ ವರ್ಷ ಜುಲೈ 6ರಂದು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು 40% ಕಮಿಷನ್ ವಿಚಾರದ ಕುರಿತು ದೂರು ನೀಡುತ್ತಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಡವವಾಡಿ ರಾಜ್ಯದಲ್ಲಿ ಅವೃದ್ಧಿ ಕುಂಠಿತವಾಗಿದೆ ಎಂದು ವಿವರಿಸುತ್ತಾರೆ. ಪ್ರಧಾನಮಂತ್ರಿಗಳು ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಭ್ರಷ್ಟಾಚಾರ ತಡೆಯಬೇಕು, ರಾಜ್ಯದ 1 ಲಕ್ಷ ಗುತ್ತಿಗೆದಾರರಿಗೆ ನ್ಯಾಯ ಒದಗಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ನಂತರ ಮುಖ್ಯಮಂತ್ರಿ ಬೊಮ್ಮಾಯಿ ಅವರು ದೂರಿನನ್ವಯ ಮುಖ್ಯ ಕಾರ್ಯದರ್ಶಿಗಳಿಗೆ ಕಳೆದ ವರ್ಷ ನವೆಂಬರ್ 25ರಂದು ಪತ್ರ ಬರೆದು, 2 ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸುವುದು, 50 ಕೋಟಿಗೂ ಮೇಲ್ಪಟ್ಟ ಕಾಮಗಾರಿಗಳನ್ನು ನೀಡಲು ಮಾನದಂಡ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರ ನಡೆದಿರುವ ಎಲ್ಲ ಕಾಮಗಾರಿಗಳ ಪರಿಶೀಲಿಸಿ ಅಕ್ರಮ ನಡೆದರೆ ತನಿಖೆ ನಡೆಸಬೇಕು ಎಂದು ಸೂಚಿಸಿರುತ್ತಾರೆ ಎಂದರು.
ಮುಖ್ಯಮಂತ್ರಿಗಳು ಗುತ್ತಿಗೆದಾರರ ಸಂಘದ ಜತೆ ಯಾವುದೇ ಮಾತುಕತೆ ನಡೆಸುವುದಿಲ್ಲ. ನಂತರ ರಾಜಕೀಯವಾಗಿ ಚರ್ಚೆ, ಟೀಕೆ ಎದುರಾದ ನಂತರ ಏಪ್ರಿಲ್ ನಲ್ಲಿ ಗುತ್ತಿಗೆದಾರರ ಸಂಘದ ಜತೆ ಸಭೆ ಮಾಡುತ್ತಾರೆ. ಆಗ ಮುಖ್ಯಮಂತ್ರಿಗಳಿಗೆ ಲಿಖಿತ ರೂಪದಲ್ಲಿ ಮನವಿ ಸಲ್ಲಿಕೆಯಾಗುತ್ತದೆ ಎಂದ ರಮೇಶ್ ಬಾಬು, ಪ್ರಧಾನಮಂತ್ರಿಗಳು ಬೆಂಗಳೂರು ಹಾಗೂ ಮೈಸೂರು ಕಾರ್ಯಕ್ರಮಗಳಿಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದರು. ಬೆಂಗಳೂರಿನಲ್ಲಿ ಅವರ ಭೇಟಿಗೆ ನಗರ ಶೃಂಗಾರಕ್ಕೆ 24 ಕೋಟಿ ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವೇ ಮಾಹಿತಿ ನೀಡಿದೆ. ಒಬ್ಬ ಗುತ್ತಿಗೆದಾರರಿಗೆ 11.5 ಕೋಟಿ ಪಾವತಿಸಿ ಕಳಪೆ ಕಾಮಗಾರಿ ನಡೆದಿದೆ. ಈ ವಿಚಾರವಾಗಿ ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ ಕೇಳಿದ ನಂತರ ಅವರಿಗೆ 3 ಲಕ್ಷ ದಂಡವನ್ನು ವಿಧಿಸಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ದೂರಿದರು.
11.5 ಕೋಟಿ ಬಿಲ್ ಪಾವತಿ ಮಾಡಿ, ಇವರೇ ಕಳಪೆ ಕಾಮಗಾರಿ ಎಂದು ಕೇವಲ 3 ಲಕ್ಷ ದಂಡ ಹಾಕಲಾಗಿದೆ. ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ? ಬೆಂಗಳೂರಿನ ಸಂಪುಟ ಸಚಿವರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಒಪ್ಪಿಕೊಳ್ಳಲು ಈ ಸರ್ಕಾರಕ್ಕೆ ಯಾಕೆ ಶಕ್ತಿ ಇಲ್ಲ? ಈ ಸಚಿವರು ಬೇನಾಮಿ ಹೆಸರಲ್ಲಿ ಕಾಮಗಾರಿ ಮಾಡಿದ್ದಾರೆ ಎಂದು ಹೇಳುವ ತಾಕತ್ತು ಮುಖ್ಯಮಂತ್ರಿಗಳಿಗಿಲ್ಲವೇ? 40% ಕಮಿಷನ್ ಆರೋಪಕ್ಕೆ ಪೂರಕವಾಗಿ ಈ ಕಳಪೆ ಕಾಮಗಾರಿ ನಡೆದಿದೆ ಎಂದು ಆರೋಪಿಸಿದ ಅವರು, ಗುತ್ತಿಗೆದಾರರ ಸಂಘದ ದೂರಿನ ನಂತರ ಈ ಸಂಘ ಹಾಗೂ ಅದರ ಪದಾಧಿಕಾರಿಗಳನ್ನು ಹಣಿಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಇವರಿಗೆ ಗುತ್ತಿಗೆ ಸಿಗದಂತೆ ತಪ್ಪಿಸುವುದು, ಗುತ್ತಿಗೆದಾರರಿಗೆ ಬಿಲ್ ತಡೆಹಿಡಿದು, ಪರೋಕ್ಷವಾಗಿ ಗುತ್ತಿಗೆದಾರರ ಸಂಘದವನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಇನ್ನು ಗುತ್ತಿಗೆದಾರರ ಸಂಘ ಮಾಡಿದ ಆರೋಪದ ಪೈಕಿ, ಕೆಆರ್ ಡಿಎಲ್ ಸಂಸ್ಥೆ ಮೂಲಕ ರಾಜ್ಯದ ನಿರ್ಮಿತಿ ಕೇಂದ್ರದ ಮೂಲಕ ಸ್ಥಳೀಯ ಶಾಸಕರು ಟೆಂಡರ್ ರಹಿತವಾಗಿ ಕಾಮಗಾರಿಗಳನ್ನು ತಮ್ಮ ಬಂಧುಗಳು ಹಾಗೂ ಬೇನಾಮಿ ಹೆಸರಲ್ಲಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೂ ಇದ್ಯಾವುದರ ಮೇಲೆ ಒಂದೇ ಒಂದು ಪ್ರಕರಣದ ತನಿಖೆಯಾಗಿಲ್ಲ ಎಂದು ರಮೇಶ್ ಬಾಬು ಅವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ನಿರಾವರಿ ಇಲಾಖೆ, ಆರೋಗ್ಯ ಇಲಾಖೆ, ಲೋಕೋಪಯೋಗಿ ಇಲಾಖೆಗಳಲ್ಲಿ ಆಗಿರುವ ಅಕ್ರಮಗಳನ್ನು ಬಿಚ್ಚಿಟ್ಟಿದ್ದು, ಕೆಲವು ಸಚಿವರುಗಳ ವಿರುದ್ಧವೂ ಆರೋಪ ಮಾಡಲಾಗಿದೆ ಎಂದು ಬೊಟ್ಟು ಮಾಡಿದ ಅವರು, ‘ನಾನು ತಿನ್ನುವುದಿಲ್ಲ, ಬೇರೆಯವರಿಗೂ ತಿನ್ನಲು ಬಿಡುವುದಿಲ್ಲ’ ಎಂದು ಹೇಳುವ ಪ್ರಧಾನಿಗಳು, ಬೆಂಗಳೂರಿಗೆ ಭೇಟಿ ನೀಡಿದ ನಂತರ ಆಗುತ್ತಿರುವ ಬೆಳವಣಿಗೆಗಳೇನು? ಯಾವ ಕಾರಣಕ್ಕೆ ಗೃಹ ಇಲಾಖೆ ಸಂಬಂಧವಿಲ್ಲದಿಲ್ಲರೂ ಸಂಘದಿಂದ ದಾಖಲೆ ಪಡೆಯಲು ಮೌಖಿಕ ಆದೇಶ ನೀಡಲಾಗಿದೆ? ಇದೆಲ್ಲದರ ಹಿಂದೆ ರಾಜ್ಯ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಂತ್ರಿಗಳನ್ನು ರಕ್ಷಣೆ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಈಶ್ವರಪ್ಪನವರ ಪ್ರಕರಣದಲ್ಲೂ ಬಿಜೆಪಿ ಕಾರ್ಯಕರ್ತ ದೂರು ನೀಡಿದ ನಂತರ ಆತನಿಗೆ ಹೆದರಿಸಿ ಆತ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣ ಮಾಡಲಾಯಿತು. ನಂತರ ಸಾರ್ವಜನಿಕ ಒತ್ತಾಯಕ್ಕೆ ಈಶ್ವರಪ್ಪನವರ ರಾಜೀನಾಮೆ ಪಡೆಯಲಾಯಿತು. ಇದುವರೆಗೂ ಸಂತೋಷ್ ಪಾಟೀಲ್ ಅವರ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ, ಆತ ಮಾಡಿದ ಕಾಮಗಾರಿಗೆ ಹಣ ಬಿಡುಗಡೆ ಮಾಡಿಲ್ಲ. ಇದು ರಾಜ್ಯ ಸರ್ಕಾರ ತನ್ನ ವಿರುದ್ಧ ದೂರು ನೀಡುವವರನ್ನು ಹಣಿಯುವ ಪ್ರಯತ್ನಕ್ಕೆ ಸಾಕ್ಷಿಯಾಗಿದೆ ಎಂದು ವಿಶ್ಲೇಷಿಸಿದರು.
ಕೇಂದ್ರ ಸರ್ಕಾರಕ್ಕೆ ರಾಜ್ಯದಲ್ಲಿನ ಭ್ರಷ್ಟಾಚಾರ ತಡೆಯುವ ಉದ್ದೇಶ ನಿಜವೇ ಆಗಿದ್ದರೆ ಗೃಹ ಇಲಾಖೆ ಮೂಲಕ ಗುತ್ತಿಗೆದಾರರ ಸಂಘವನ್ನು ಹಣಿಯುವ ಪ್ರಯತ್ನ ಮಾಡುತ್ತಿರಲಿಲ್ಲ. ಲಿಖಿತ ನೊಟೀಸ್ ಕೊಟ್ಟು, ಮಾಧ್ಯಮಗಳ ಸಮಕ್ಷಮದಲ್ಲಿ ದಾಖಲೆ ಕಲೆಹಾಕುತ್ತಿದ್ದರು ಎಂದ ರಮೇಶ್ ಬಾಬು, ಬೊಮ್ಮಾಯಿ ಅವರು ರಾಜ್ಯದ ಮುಖ್ಯಮಂತ್ರಿಯಾದ ನಂತರ ಸರ್ಕಾರದ ಮೇಲೆ ಬಿಟ್ ಕಾಯಿನ್, ಪಿಎಸ್ ಐ ನೇಮಕಾತಿ, ನೀರಾವರಿ ಯೋಜನೆ, ಈಶ್ವರಪ್ಪನವರ 40% ಕಮಿಷನ್, ಬೇರೆ ಸಚಿವರ ಮೇಲೆ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಇದ್ಯಾವುದರ ಮೇಲೆ ಸಮಗ್ರವಾದ ತನಿಖೆಯಾಗಿಲ್ಲ. ಪಿಎಸ್ ಐ ಹಗರಣದಲ್ಲಿ ಸಣ್ಣ ಪುಟ್ಟ ಅಧಿಕಾರಿಗಳ ಬಂಧನವಾಗಿದೆಯೇ ಹೊರತು ದೊಡ್ಡ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಎಲ್ಲ ವಿಚಾರದಲ್ಲಿ ಬೊಮ್ಮಾಯಿ ಅವರು ಪಲಾಯನ ವಾದ ಮಾಡುತ್ತಿರುವುದೇಕೆ? ರಾಜ್ಯದ ಮುಖ್ಯಮಂತ್ರಿಯಾಗಿ ನೀವು ರಾಜ್ಯದ ಜನರಿಗೆ ಉತ್ತರ ಕೊಡುವ ಜವಾಬ್ದಾರಿ ಇದೆ. ಆದರೆ ಸರ್ಕಾರ ಉತ್ತರ ನೀಡದೇ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ ಎಂದರು.
ಕೆಂಪಣ್ಣ ಅವರು ಈ ವಿಚಾರವಾಗಿ ರಾಜ್ಯಪಾಲರಾದ ಗೆಹ್ಲೋಟ್ ಅವರಿಗೂ ದೂರು ನೀಡಿದ್ದು, ಅವರು ರಾಜಕಾರಣಕ್ಕೆ ಬರುವ ಮುನ್ನ ಗುತ್ತಿಗೆದಾರರಾಗಿ ಕೆಲಸ ಮಾಡಿದವರಾಗಿದ್ದು, ಅವರ ನೋವು ಅರ್ಥವಾಗುತ್ತದೆ. ಆದರೂ ಅವರು ತನಿಖೆಗೆ ಯಾಕೆ ಆದೇಶಿಸಿಲ್ಲ. ಅವರು ಬಿಜೆಪಿ ಒತ್ತಡಕ್ಕೆ ಮಣಿದಿದ್ದಾರಾ? ಎಂಬ ಪ್ರಶ್ನೆ ಮೂಡುತ್ತದೆ ಎಂ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಆರೋಪದ ವಿಚಾರವಾಗಿ ರಾಜ್ಯ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಿಸಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಸಚಿವರು ಹಾಗೂ ಅಧಿಕಾರಿಗಳ ಹೆಸರು ಬಹಿರಂಗವಾಗಬೇಕು ಆಗ್ರಹಿಸಿದರು.





































































