ಬೆಂಗಳೂರು: ‘ನಮ್ಮ ಮನೆ ಹುಡುಗನಿಗೆ ನಾನು ಹೊಡೆದೆ. ತಪ್ಪು ಮಾಡಿದಾಗ ನಾವು ಬಯ್ಯುತ್ತೇವೆ. ಅದು ನಮ್ಮ ನಡುವಿನ ಪ್ರೀತಿಯ ಸಂಬಂಧ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳಿಗೆ ಭಾನುವಾರ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್, ‘ಆತ ನಮ್ಮ ಹುಡುಗ, ನಮ್ಮ ದೂರದ ಸಂಬಂಧಿ. ಹೆಗಲ ಮೇಲೆ ಕೈ ಹಾಕಿದಾಗ ಬೇರೆಯವರು ಏನು ತಿಳಿಯುತ್ತಾರೆ ಎಂದು ಬೈದೆ. ಜೋರಾಗಿ ಹೊಡೆದದ್ದೂ ನಿಜ. ತಪ್ಪು ಮಾಡಿದಾಗ ಬಯ್ಯುವುದು ಸಹಜ. ಅದು ನಮ್ಮ ಪ್ರೀತಿಯ ಸಂಬಂಧ ಎಂದರು.
ನಾವು, ಅವರು ಎಲ್ಲ ತಪ್ಪು ಮಾಡುತ್ತೇವೆ. ನಿಮ್ಮ ಖುಷಿಗೆ ನೀವು ಅದನ್ನು ತೋರಿಸುತ್ತಿದ್ದೀರಿ. ನೀವು ಅವನನ್ನು ನಾಯಕನನ್ನಾಗಿ ಮಾಡಿ ಎಂದವರು ಹೇಳಿದರು.
ಜಾತಿಗಣತಿ ವೆಚ್ಚ ಪೋಲಾಗಬಾರದು
ಜಾತಿಗಣತಿಗೆ ಸರ್ಕಾರದ ಬೊಕ್ಕಸದಿಂದ ನೂರಾರು ಕೋಟಿ ವೆಚ್ಚ ಮಾಡಲಾಗಿದೆ. ಹೀಗಾಗಿ ಅದು ವ್ಯರ್ಥವಾಗಬಾರದು ಎಂದು ಹಿಂದುಳಿದ ವರ್ಗಗಳ ನಾಯಕರು ನಮ್ಮನ್ನು ಭೇಟಿ ಮಾಡಿ, ಹೇಳಿದ್ದಾರೆ. ಅವರು ಕೇಳುವುದರಲ್ಲಿ ತಪ್ಪಿಲ್ಲ ಎಂದ ಅವರು, ಆ ವರದಿಯಲ್ಲಿ ಏನಿದೆಯೋ ಗೊತ್ತಿಲ್ಲ. ಈ ವಿಚಾರದಲ್ಲಿ ನಾನು ಬೇರೆಯವರ ರೀತಿ ಮಾತನಾಡಲು ಸಾಧ್ಯವಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದೇನೆ. ನಾನು, ವಿರೋಧ ಪಕ್ಷದ ನಾಯಕರು ಎಲ್ಲರ ಜತೆ ಚರ್ಚಿಸುತ್ತೇವೆ. ಈ ವಿಚಾರದಲ್ಲಿ ಬಿಜೆಪಿ ನಿಲುವು ಏನು?ಎಂಬುದನ್ನು ಮೊದಲು ನೋಡೋಣ ಎಂದರು.