ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸೋಮವಾರ ರಾಜಭವನದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎನ್‌ಡಿಎ) ಹೊಸ ಸರ್ಕಾರ ರಚಿಸುವ ಒಂದು ದಿನ ಮೊದಲು, ಅಂದರೆ ನವೆಂಬರ್ 19 ರಂದು ಪ್ರಸ್ತುತ ವಿಧಾನಸಭೆಯನ್ನು ವಿಸರ್ಜಿಸುವಂತೆ ಮನವಿ ಮಾಡಿದ್ದಾರೆ.
2005 ರಿಂದ ದಾಖಲೆಯ 10ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. 2005ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೇರಿದ ಬಳಿಕ, ನಿತೀಶ್ ಕುಮಾರ್ ಅವರು ಈಗ ದಾಖಲೆಯ 10ನೇ ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ನವೆಂಬರ್ 20ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ಅದ್ದೂರಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು ಹಾಗೂ ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆ ಇದೆ.
ಬೆಳಿಗ್ಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಅವರಿಗೆ ವಿಧಾನಸಭೆ ವಿಸರ್ಜನೆ ಮನವಿ ಮಾಡುವಂತೆ ಅಧಿಕಾರ ನೀಡಲಾಗಿತ್ತು. ವಿಧಾನಸಭೆ ವಿಸರ್ಜನೆಯಾದ ನಂತರ ಹೊಸ ಎನ್‌ಡಿಎ ಸರ್ಕಾರ ರಚನೆಗೆ ಹಕ್ಕು ಮಂಡಿಸುವ ನಿರೀಕ್ಷೆಯಿದೆ.























































