ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತದಿಂದ ಆಗುತ್ತಿರುವ ಸಾವಿನ ಸರಣಿ ಮುಂದುವರಿದೆ. ಭಾನುವಾರ ಒಂದೇ ದಿನ ರಾಜ್ಯದಲ್ಲಿ ಆರು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ ಎಂಬ ಸುದ್ದಿ ಬೆಚ್ಚಿ ಬೀಳಿಸಿದೆ. ಮೈಸೂರಿನಲ್ಲಿ ಇಬ್ಬರು, ಬೆಂಗಳೂರು, ಚಿಕ್ಕಮಗಳೂರು ಹಾಗೂ ಗದಗ ಒಬ್ಬೊಬ್ಬರು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕು ಕಚೇರಿಯಲ್ಲಿ ಎಸ್ಡಿಎ ಆಗಿದ್ದ, ಮಂಡ್ಯ ಜಿಲ್ಲೆ ಕಿಲಾರೆ ಗ್ರಾಮದ 44 ವರ್ಷದ ಅರುಣ್, ಮೈಸೂರಿನಿಂದ ಬೆಂಗಳೂರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇನ್ನೊಂದೆಡೆ, ಟಿ.ನರಸೀಪುರ ದೇಗುಲವೊಂದರ ಅರ್ಚಕ 66 ವರ್ಷದ ಸಂಪತ್ ಕುಮಾರ್ ಸಎಂಬವರೂ ಹೃದಯಾಘಾತದಿಂದ ಬಲಿಯಾಗಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಸರ್ಜಾಪುರ ನಿವಾಸಿಯಾಗಿರುವ 46 ವರ್ಷದ ಬಸವರಾಜ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಇವರು ವಾರಾಂತ್ಯದಲ್ಲಿ ಸ್ನೇಹಿತರೊಂದಿಗೆ ರೆಸಾರ್ಟ್‌ಗೆ ಹೋಗಿದ್ದರು. ಅಲ್ಲಿ ನೃತ್ಯ ಮಾಡುತ್ತಿದ್ದಾಗಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಗದಗ ಜಿಲ್ಲೆ ಲಕ್ಷ್ಮೇಶ್ವರ ನಿವಾಸಿ 42 ವರ್ಷದ ಶೋಭಾ ವಡಕಣ್ಣವರ ಎನ್ನುವರು ಸಹ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ 50 ವರ್ಷದ ದಾಕ್ಷಾಯಿಣಿ ಎಂಬವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದಾವಣಗೆರೆ ಶಕ್ತಿ ನಗರದ ನಿವಾಸಿ 40 ವರ್ಷದ ಅನಿಲ್ ಎಂಬವರು ಬೆಳಿಗ್ಗೆ ವಾಕಿಂಗ್ ಮಾಡುತ್ತಿದ್ದಸಂದರ್ಭದಲ್ಲಿ ಕುಸಿದು ಬಿದ್ದಿದ್ದಾರೆ.
ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದವರ ಪೈಕಿ ಬಹುತೇಕರು 45 ವರ್ಷದೊಳಗಿನವರು.