ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನಿಷೇಧಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, “ಈ ಹೇಳಿಕೆ ಖರ್ಗೆ ಅವರದೇ ಅಲ್ಲ, ಅದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಒತ್ತಡದ ಫಲ” ಎಂದು ಟೀಕಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಖರ್ಗೆ ಅವರನ್ನು ಗೌರವಿಸುತ್ತೇನೆ. ಅವರು ರಾಷ್ಟ್ರ ಮಟ್ಟದ ಹಿರಿಯ ರಾಜಕಾರಣಿ. ಆದರೆ ಅವರ ಪಕ್ಷದಲ್ಲಿ ಒಂದು ಕುಟುಂಬದ ಪ್ರಭಾವದಿಂದ ಅವರು ಸ್ವತಂತ್ರವಾಗಿ ಯೋಚಿಸಲು ಸಾಧ್ಯವಾಗುತ್ತಿಲ್ಲ. ತಮ್ಮ 50 ವರ್ಷಗಳ ರಾಜಕೀಯ ಜೀವನದಲ್ಲಿ ಅವರು ಆರ್‌ಎಸ್‌ಎಸ್ ವಿರುದ್ಧ ಒಂದೇ ಸಲವೂ ಮಾತನಾಡಿಲ್ಲ” ಎಂದು ಹೇಳಿದರು.
“ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಯವರಿಂದಲೂ ಆರ್‌ಎಸ್‌ಎಸ್ ನಿಷೇಧಿಸಲು ಸಾಧ್ಯವಾಗಲಿಲ್ಲ. ಹಾಗಿದ್ದಾಗ ನಿಮ್ಮಿಂದ ಅದು ಸಾಧ್ಯವೇ? ಏನು ಪ್ರಶ್ನಿಸಿದ ಶೋಭಾ, ಈ ರೀತಿಯ ಮಾತುಗಳು ಕೇವಲ ರಾಹುಲ್ ಮತ್ತು ಸೋನಿಯಾ ಗಾಂಧಿಯವರ ಸಂತೃಪ್ತಿಗಾಗಿ ಹೊರಬರುತ್ತಿವೆ ಎಂದು ಟೀಕಿಸಿದರು.
“ರಾಹುಲ್ ಗಾಂಧಿಗೆ ಯಾವ ಅಧಿಕಾರವಿದೆ? ಅವರು ಕೇವಲ ವಿರೋಧ ಪಕ್ಷದ ನಾಯಕರು. ಅವರಿಗೂ ತಮ್ಮ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷವು ಐದು ದಶಕಗಳ ಕಾಲ ಈ ದೇಶವನ್ನು ಆಳಿತು, ಆದರೆ ಆರ್‌ಎಸ್‌ಎಸ್ ವಿರುದ್ಧ ಯಾವ ಸರ್ಕಾರವೂ ನಿಷೇಧದ ಪ್ರಯತ್ನ ಮಾಡಿಲ್ಲ. ಈಗ ಏಕೆ ಇಂತಹ ಧ್ವನಿ?” ಎಂದು ಶೋಭಾ ಪ್ರಶ್ನಿಸಿದರು.
ಒಂದು ಸಮುದಾಯವನ್ನು ಮೆಚ್ಚಿಸಲು ಕಾಂಗ್ರೆಸ್ ತುಷ್ಟೀಕರಣ ರಾಜಕಾರಣದಲ್ಲಿ ತೊಡಗಿಕೊಂಡಿದೆ. ಖರ್ಗೆ ಅವರ ಹೇಳಿಕೆ ಕೂಡಾ ಅದಕ್ಕೆ ಉದಾಹರಣೆ. ಆದರೆ ಆರ್‌ಎಸ್‌ಎಸ್‌ನ್ನು ನಿಷೇಧಿಸುವುದು ಸಾಧ್ಯವಲ್ಲ. ಆರ್‌ಎಸ್‌ಎಸ್ ದೇಶವನ್ನು ರಕ್ಷಿಸಲು, ಸಂಸ್ಕೃತಿಯನ್ನು ಉಳಿಸಲು ಮತ್ತು ಸನಾತನ ಧರ್ಮವನ್ನು ಕಾಪಾಡಲು ಕಾರ್ಯನಿರ್ವಹಿಸುತ್ತಿದೆ. ಮಕ್ಕಳು, ಯುವಕರು, ಹಿರಿಯರು ಎಲ್ಲರೂ ಅದರೊಂದಿಗೆ ಕೈಜೋಡಿಸಿದ್ದಾರೆ ಎಂದು ಶೋಭಾ ಕರಾಂದ್ಲಾಜೆ ಹೇಳಿದರು.


















































