ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ವಿರುದ್ದ ಸಿಡಿದೆದ್ದಿರುವ ಮುಸ್ಲಿಂ ಸಂಘಟನೆಗಳು ಕಾನೂನು ಸಮರ ಆರಂಭಿಸಿವೆ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಸಿಎಎ ಜಾರಿಯ ಅಧಿಸೂಚನೆ ನಿಯಮಗಳ ಅನುಷ್ಠಾನಕ್ಕೆ ತಡೆ ಕೋರಿ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಪೌರತ್ವ ತಿದ್ದುಪಡಿ ನಿಯಮಗಳು ಅನಿಯಂತ್ರಿತವಾಗಿದೆ ಮತ್ತು ಧಾರ್ಮಿಕ ಗುರುತಿನ ಆಧಾರದ ಮೇಲೆ ಕೆಲವು ವ್ಯಕ್ತಿಗಳ ಪರವಾಗಿ ಅನ್ಯಾಯದ ಪ್ರಯೋಜನವನ್ನು ಸೃಷ್ಟಿಸುತ್ತದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಆರೋಪಿಸಿದೆ. ಸಿಎಎ ಜಾರಿಯು ಸಂವಿಧಾನದ 14 ಮತ್ತು 15ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಮುಸ್ಲಿಂ ಲೀಗ್ ಅರ್ಜಿಯಲ್ಲಿ ಸರ್ವೋಚ್ಚ ನ್ಯಾಯಾಲಯದ ಗಮನಸೆಳೆದಿದೆ.






















































