ಬೆಂಗಳೂರು; ಫ್ರಾನ್ಸ್‌ನ ಲಿಯೋನ್‌ನಲ್ಲಿ ನಡೆದ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕದ ನಾಲ್ವರು ಶ್ರೇಷ್ಠತಾ ಪದಕಗಳನ್ನು ಪಡೆದ್ದಿದ್ದರೆ. ಫ್ರಾನ್ಸ್‌ನ ಲಿಯೋನ್‌ನಲ್ಲಿ ಇದೇ ಸೆಪ್ಟೆಂಬರ್ 10 ರಿಂದ 15 ರವರೆಗೆ ನಡೆದ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಕರ್ನಾಟಕದ 9 ಸ್ಪರ್ಧಿಗಳು ಭಾಗವಹಿಸಿದ್ದು, ಈ ಪೈಕಿ ಪ್ರೇಮ್, ಹರ್ಷವರ್ಧನ್, ಭಾನುಪ್ರಸಾದ್, ದರ್ಶನ್ ಗೌಡ 3 ಕೌಶಲ್ಯ ಸ್ಪರ್ಧೆಯಲ್ಲಿ ಶ್ರೇಷ್ಠತಾ ಪದಕ ಪಡೆದಿದ್ದಾರೆ.
ಇದಕ್ಕೂ ಮುನ್ನ ಕಳೆದ ಮೇ ತಿಂಗಳಿನಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ಕರ್ನಾಟಕದಿಂದ 62 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಯುವ ಕೌಶಲ್ಯ ಸ್ಪರ್ಧೆಯಲ್ಲಿ 13 ಚಿನ್ನದ ಪದಕ, 12 ಬೆಳ್ಳಿ ಪದಕ, 4 ಕಂಚಿನ ಪದಕ ಹಾಗೂ 19 ಶ್ರೇಷ್ಠತಾ ಪದಕ ಗೆಲ್ಲುವುದರೊಂದಿಗೆ ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ 2ನೇ ಸ್ಥಾನ ಪಡೆದಿದೆ. ಅಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಕರ್ನಾಟಕದ ಪ್ರೇಮ್ (ಆಡಿಟಿವ್ ಮ್ಯಾನುಫ್ಯಾಕ್ಚರಿಂಗ್), ಹರ್ಷವರ್ಧನ್ (ಕುಕ್ಕಿಂಗ್), ಭಾನುಪ್ರಸಾದ್, ದರ್ಶನ್ ಗೌಡ (ಮೆಕಾಟ್ರಾನಿಕ್ಸ್) ಫ್ರಾನ್ಸ್‌ನ ಲಿಯೋನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಅಲ್ಲಿಯೂ ತಮ್ಮ ಚಾಕಚಕ್ಯತೆ ತೋರಿದ ನಾಲ್ವರು ಶ್ರೇಷ್ಠತಾ ಪದಕ ಪಡೆದಿದ್ದಾರೆ.
ಫ್ರಾನ್ಸ್ ನ ಲಿಯೋನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಶ್ರೇಷ್ಠತಾ ಪದಕಗಳನ್ನು ಪಡೆದಿರುವ ಕರ್ನಾಟಕದ ಸಾಧಕರನ್ನು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಶರಣ ಪ್ರಕಾಶ್ ಪಾಟೀಲ್ ಅಭಿನಂದಿಸಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಆಡಿಟಿವ್ ಮ್ಯಾನುಫ್ಯಾಕ್ಚರಿಂಗ್, ಕುಕ್ಕಿಂಗ್, ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ಪದಕ ಗಿಟ್ಟಿಸಿರುವ ಪ್ರೇಮ್, ಹರ್ಷವರ್ಧನ್, ಭಾನುಪ್ರಸಾದ್, ದರ್ಶನ್ ಗೌಡ ಅವರಿಗೆ ವೈಯಕ್ತಿಕವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ. ನಿಮ್ಮ ಅಸಾಧಾರಣ ಪ್ರತಿಭೆಯಿಂದ ನಮ್ಮ ಕರ್ನಾಟಕ ಕೌಶಲ್ಯತೆ ಹಾಗೂ ನಿಪುಣತೆಯಲ್ಲಿ ವಿಶ್ವ ಮಟ್ಟದಲ್ಲಿ ಮನ್ನಣೆ ಗಳಿಸಿದೆ. ನಿಮ್ಮಂಥ ಪ್ರತಿಭೆಗಳಿಗೆ ಉತ್ತೇಜನ ನೀಡಲು ನಮ್ಮ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸದಾ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ನಮ್ಮ ಇಲಾಖೆಯ ವತಿಯಿಂದ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತಂದು, ರಾಜ್ಯವನ್ನು ಕೌಶಲ್ಯ ಹಾಗೂ ನಿಪುಣ ರಾಜ್ಯವನ್ನಾಗಿ ಮಾಡಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೆ.ಎಸ್.ಡಿ.ಸಿ ಅಧ್ಯಕ್ಷರಾದ ಕಾಂತಾ ನಾಯ್ಕ್, ಕೆ.ಎಸ್.ಡಿ.ಎ ಅಧ್ಯಕ್ಷರಾದ ಡಾ. ಇ.ವಿ. ರಮಣ ರೆಡ್ಡಿ, ಕೆ.ಎಸ್.ಡಿ.ಸಿ. ವ್ಯವಸ್ಥಾಪಕ ನಿರ್ದೇಶಕರಾದ ಎಂ. ಕನಗವಲ್ಲಿ, ಜಿ.ಟಿ.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ವೈ.ಕೆ. ದಿನೇಶ್ ಕುಮಾರ್, ಹಿರಿಯ ಅಧಿಕಾರಿಗಳಾದ ಕೃಷ್ಣ ಕುಮಾರ್, ಕೃಷ್ಣ ಗೌಡ
ಕರ್ನಾಟಕದ ನಿಯೋಗದಲ್ಲಿದ್ದರು.