ವಾಲ್ಮಿಕಿ ನಿಗಮ ಹಗರಣ; ಮಾಜಿ ಸಚಿವ ಬಿ.ನಾಗೇಂದ್ರ, ಶಾಸಕ ಬಸನಗೌಡ ದದ್ದಲ್‌ಗೆ ಎಸ್‌ಐಟಿ ನೋಟೀಸ್
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ವಾಲ್ಮಿಕಿ ನಿಗಮ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ ಅವರಿಗೆ ಪೊಲೀಸರು ನೊಟೀಸ್ ನೀಡಿದ್ದಾರೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳವು ಕಾಂಗ್ರೆಸ್ ಶಾಸಕರಿಗೆ ನೊಟೀಸ್ ನೀಡದ ವಿಚಾರ ಪ್ರತಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಎಸ್ಐಟಿ ಅಧಿಕಾರಿಗಳು ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಅವರಿಗೆ ನೊಟೀಸ್ ನೀಡಿದೆ. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಈ ಶಾಸಕರಿಗೆ ಎಸ್‌ಐಟಿ ಸೂಚಿಸಿದೆ.