ಬೆಂಗಳೂರು: ಸುರಂಗ ರಸ್ತೆ ಯೋಜನೆಯನ್ನು ವಿರೋಧಿಸಿ ಲಾಲ್‌ಬಾಗ್‌ನಲ್ಲಿ ನವೆಂಬರ್ 2 ರ ಬೆಳಗ್ಗೆ 8 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸುರಂಗ ರಸ್ತೆ ಯೋಜನೆಯ ಹೆಸರು ಕೇಳಿದರೆ ಜನರು ಭೀತಿಗೊಳ್ಳುತ್ತಿದ್ದಾರೆ. ಎಲ್ಲಿ ಯಾರ ಮನೆ ಹೋಗಲಿದೆ ಎಂದು ತಿಳಿಯುತ್ತಿಲ್ಲ. ಲಾಲ್‌ಬಾಗ್‌ನಲ್ಲಿ 6 ಎಕರೆ ಜಮೀನು ಕಬಳಿಕೆ ಮಾಡಿ ಯೋಜನೆ ಮಾಡಲಾಗುತ್ತದೆ. ಇದಕ್ಕೆ ಯಾವ ಇಲಾಖೆಯೂ ಅನುಮತಿ ನೀಡಿಲ್ಲ. ಬಿಹಾರ ಚುನಾವಣೆ ಬಂದಿರುವುದರಿಂದ ಹಣ ಮಾಡಲು ಈ ಯೋಜನೆ ಜಾರಿ ಮಾಡುತ್ತಿರಬಹುದು. ಲಾಲ್‌ಬಾಗ್ ಉಳಿಸಿ, ಬೆಂಗಳೂರು ರಕ್ಷಿಸಿ ಎಂಬ ಘೋಷಣೆಯಡಿ ಇದೇ ನವೆಂಬರ್ 2 ರ ಭಾನುವಾರ ಬೆಳಗ್ಗೆ 8 ಗಂಟೆಗೆ ಲಾಲ್‌ಬಾಗ್‌ನಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಸಂಬಂಧಿಸಿದಂತೆ ಎಲ್ಲ ಶಾಸಕರು ಸಭೆ ಸೇರಿ ಚರ್ಚೆ ಮಾಡುತ್ತೇವೆ. ಈ ಬಗ್ಗೆ ಹೋರಾಟ ಮಾಡುವ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ ಅವಧಿಯಲ್ಲಿ ರಸ್ತೆ ದುರಸ್ತಿಗೆ 8,000 ಕೋಟಿ ರೂ. ನೀಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಡಾಂಬರೀಕರಣ ಬಿಟ್ಟು ಹೊಸದಾಗಿ ರಸ್ತೆ ನಿರ್ಮಿಸಬೇಕಿದೆ. ಸಿಎಂ ಸಿದ್ದರಾಮಯ್ಯ ಒಮ್ಮೊಮ್ಮೆ ಒಂದೊಂದು ರೀತಿಯ ಅನುದಾನದ ಬಗ್ಗೆ ಹೇಳುತ್ತಿದ್ದಾರೆ. ಕಾಟಾಚಾರಕ್ಕೆ ಬ್ರ್ಯಾಂಡ್ ಬೆಂಗಳೂರಿನ ಘೋಷಣೆ ಮಾಡಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಯಾವಾಗಲೂ ಬ್ರ್ಯಾಂಡ್ ಬಗ್ಗೆ ಹೇಳುತ್ತಾರೆ. ಅಧಿಕಾರಿಗಳಂತೂ ಇವರ ಮಾತನ್ನು ಕೇಳುತ್ತಿಲ್ಲ ಎಂದರು.
ಸಂಸದ ತೇಜಸ್ವಿ ಸೂರ್ಯ ಅವರನ್ನು ಅವಹೇಳನ ಮಾಡುವುದು ತಪ್ಪು. ಇದು ಒಂದು ಲೋಕಸಭಾ ಕ್ಷೇತ್ರಕ್ಕೆ ಮಾಡುವ ಅಪಮಾನ. ಸಿಎಂ ಹಾಗೂ ಡಿಸಿಎಂ ಗೌರವ ಕೊಟ್ಟು ಮಾತಾಡುವುದನ್ನು ಕಲಿಯಲಿ ಎಂದರು.
 
	    	



















































