ಹುಬ್ಬಳ್ಳಿ: ಲಾಕ್ ಡೌನ್, ಮಾರುಕಟ್ಟೆ ಸಮಸ್ಯೆ, ಬೆಂಬಲ ಬೆಲೆ ಇಲ್ಲದೆ ಕಂಗಾಲಾಗಿರುವ ತರಕಾರಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು ಅವರ ಧ್ವನಿಯಾಗಿ ಅವರ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭರವಸೆ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಸ್ಥಳೀಯ ರೈತರ ಜಮೀನಿಗೆ ಸೋಮವಾರ ಭೇಟಿ ನೀಡಿ, ಅವರ ಸಂಕಷ್ಟಗಳನ್ನು ಆಲಿಸಿದ ಶಿವಕುಮಾರ್ ಅವರು, ರೈತರ ಬೆನ್ನಿಗೆ ನಿಲ್ಲುವ ಭರವಸೆ ಕೊಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೋವಿಡ್ ಪಿಡುಗಿನ ಸಮಯದಲ್ಲಿ ರೈತರು ತೀರಾ ಸಂಕಷ್ಟದಲ್ಲಿದ್ದಾರೆ. 6 ರಿಂದ 8 ಗಂಟೆ ನಡುವೆ ಅಂದರೆ ಎರಡೇ ತಾಸಿನ ಅವಧಿಯಲ್ಲಿ ಅವರು ತರಕಾರಿ, ಹಣ್ಣು-ಹಂಪಲು ಮತ್ತು ಇತರ ಬೆಳೆಗಳನ್ನು ಮಾರಬೇಕೆಂಬ ಆದೇಶದಿಂದ ಎಲ್ಲ ಬೆಳೆಗಳು ಬಿಕರಿಯಾಗದೆ ಹಾಳಾಗುತ್ತಿವೆ ಎಂದರು.
ಬಿತ್ತನೆಯ ಸಮಯ ಪ್ರಾರಂಭವಾಗಿದ್ದರೂ ರೈತರಿಗೆ ಗೊಬ್ಬರ, ಬೀಜ ಹಾಗೂ ಡಿಎಪಿ ದೊರೆಯುತ್ತಿಲ್ಲ. ಬೆಂಬಲ ಬೆಲೆಯನ್ನೂ ನಿಗದಿಪಡಿಸಿಲ್ಲ. ದೇಶದಲ್ಲೇ ಅತ್ಯುತ್ತಮವಾದ ಕರ್ನಾಟಕದ ಮೆಣಸಿನಕಾಯಿಯನ್ನು ಮಾರಾಟ ಮಾಡಲೂ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ರೈತರ ಬೆಳೆಗೆ ಬೆಂಬಲ ಬೆಲೆ ನೀಡಿ ಅವರ ರಕ್ಷಣೆಗೆ ಮುಂದಾಗಿದ್ದೆವು. ಇಡೀ ದೇಶಕ್ಕೆ ಇಲ್ಲಿನ ಮೆಣಸಿನಕಾಯಿ ಮಾದರಿ. ಸೋಮವಾರದ ಹಿನ್ನೆಲೆಯಲ್ಲಿ ಎಪಿಎಂಸಿ ಬಂದ್ ಆಗಿದ್ದು, ಹೀಗಾಗಿ ರೈತರೊಂದೆಗೆ ಚರ್ಚೆ ಮಾಡಲು ನೇರವಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಡಿಕೆಶಿ ಹೇಳಿದರು.
ಕಳೆದ ವರ್ಷದ ಪರಿಹಾರವನ್ನೂ ಕೊಟ್ಟಿಲ್ಲ. ಸರ್ಕಾರ ತರಕಾರಿ, ಹೂ, ಹಣ್ಣು ಬೆಳೆಗಾರರಿಗೆ ಹೆಕ್ಟೇರ್ ಗೆ ₹10 ಸಾವಿರ ಪರಿಹಾರ ಘೋಷಿಸಿದೆ. ಸಣ್ಣ ರೈತರು ಅರ್ಧ ಎಕರೆಯಲ್ಲಿ ಬೆಳೆ ಬೆಳೆಯುತ್ತಾರೆ. ಆತ ತನಗೆ ಬರುವ ಬಿಡಿಗಾಸಿಗೆ ಆನ್ಲೈನ್ ನಲ್ಲಿ ಅರ್ಜಿ ಹಾಕಬೇಕಾ? ಯಾವ ಅಧಿಕಾರಿಯೂ ಈ ರೈತರನ್ನು ಭೇಟಿ ಮಾಡಿಲ್ಲ. ಸರ್ಕಾರ ಮದ್ಯ ಮಾರಾಟ ಮಾಡಲು ಅವಕಾಶ ನೀಡಿದ್ದು, ರೈತರ ಬೆಳೆ ಮಾರಾಟಕ್ಕೆ ಅವಕಾಶ ನೀಡಿಲ್ಲ. ಸರ್ಕಾರ ಯಾರ ಪರವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದವರು ಹೆಳಿದರು.
ಮುಖ್ಯಮಂತ್ರಿಗಳು,ಮುಖ್ಯ ಕಾರ್ಯದರ್ಶಿಗಳು ಮತ್ತು ಕೃಷಿ ಇಲಾಖೆ ರೈತರ ಸಮಸ್ಯೆಗೆ ಪರಿಹಾರ ಒದಗಿಸಬೇಕು. ಸರ್ಕಾರ ರೈತರ ಬಳಿ ಹೋಗಿ ಅವರ ಸಮಸ್ಯೆ ಆಲಿಸಬೇಕು. ಕೃಷಿ ಕ್ಷೇತ್ರವು ಆರ್ಥಿಕವಾಗಿ ತೊಂದರೆಗೊಳಗಾಗಿದ್ದು, ಸಹಾಯಹಸ್ತ ಚಾಚುವ ಅವಶ್ಯಕತೆಯಿದೆ. ತರಕಾರಿ ಹಾಗೂ ಹೂವು ಬೆಳೆಗಾರರ ಕೊರೋನಾ ಪರಿಹಾರ ಪ್ಯಾಕೇಜ್ ಅನ್ನು ಪ್ರತಿ ಎಕರೆಗೆ ನಾಲ್ಕು ಸಾವಿರ ರೂ.ನಿಂದ ಹತ್ತು ಸಾವಿರಕ್ಕೆ ಏರಿಸಬೇಕು. ಲಾಕ್ ಡೌನ್ ವಿಚಾರವಾಗಿ ಸರ್ಕಾರ ಯಾವ ನಿರ್ಧಾರವನ್ನು ಬೇಕಾದರೂ ತೆಗೆದುಕೊಳ್ಳಲಿ. ಆದರೆ ನಷ್ಟ ಅನುಭವಿಸುವ ಜನರಿಗೆ ಪರಿಹಾರ ನೀಡಲಿ ಎಂದ ಡಿ.ಕೆ.ಶಿವಕುಮಾರ್, ಚಾಲಕ ವೃತ್ತಿ 25 ಲಕ್ಷ ಜನರ ನಿರುದ್ಯೋಗವನ್ನು ದೂರ ಮಾಡಿದೆ. ನಾನು ನನ್ನ ಚಾಲಕ ಇಲ್ಲದೆ ಈಚೆ ಬರಲು ಸಾಧ್ಯವಿಲ್ಲ. ಚಾಲಕರ ಮೇಲೆ ನಾವು ಮಾನಸಿಕ ಒತ್ತಡ ಹಾಕಬಾರದು. ಮಾನಸಿಕವಾಗಿ ಧೈರ್ಯ ತುಂಬಿ, ಆರ್ಥಿಕವಾಗಿ ಶಕ್ತಿ ತುಂಬಬೇಕು. ಈ ಚಾಲಕರನ್ನು ಸರ್ಕಾರ ನಿರ್ಲಕ್ಷಿಸಬಾರದು ಎಂದರು.