ಬೆಂಗಳೂರು: ಕಾಂಗ್ರೆಸ್ ಪಕ್ಷದಿಂದ ಯಾರೂ ಬೇರೆ ಪಕ್ಷಕ್ಕೆ ಹೋಗುವುದಿಲ್ಲ. ಬೇರೆ ಪಕ್ಷಗಳಿಂದ ಕೆಲವರು ಕಾಂಗ್ರೆಸ್ ಪಕ್ಷ ಸೇರಿಕೊಳ್ಳಬಹುದು. ರಾತ್ರಿ ಕಂಡಿದ್ದ ಬಾವಿಗೆ ಹಗಲುಹೊತ್ತು ಯಾರಾದರೂ ಬೀಳುತ್ತಾರಾ? ಜೆಡಿಎಸ್ ಅಧ್ಯಕ್ಷರಾದ ಸಿ.ಎಂ.ಇಬ್ರಾಹಿಂ ಸುಳ್ಳು ಹೇಳುತ್ತಿದ್ದಾರೆ, ಅವರಿಗೆ ಬಾಯಿಯೇ ಬಂಡವಾಳ ಎಂದು ಕಾಂಗ್ರೆಸ್ ನಾಯಕ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ‘ನಾನು ಜೆಡಿಎಸ್ ಪಕ್ಷದ ಅಧ್ಯಕ್ಷನಾಗಿದ್ದಾಗ ಪಕ್ಷ ಮೊದಲ ಬಾರಿ 59 ಸೀಟುಗಳನ್ನು ಗೆದ್ದಿತ್ತು. ಅದಾದ ನಂತರ ಇದಕ್ಕಿಂತ ಕಡಿಮೆ ಸೀಟುಗಳನ್ನು ಜೆಡಿ ಎಸ್ ಗೆದ್ದಿದೆಯೇ ಹೊರತು ಹೆಚ್ಚಾಗಿಲ್ಲ. ಕಳೆದ ಬಾರಿ 37 ಸ್ಥಾನ ಗೆದ್ದರು, ಇದು ಪೂರ್ಣ ಬಹುಮತ ಪಡೆದಂತೆಯಾ?’ ಪ್ರಶ್ನಿಸಿದ್ದಾರೆ.
ಜನರನ್ನು ತಾವು ಅಧಿಕಾರಕ್ಕೆ ಬರುತ್ತೇವೆ ಎಂದು ನಂಬಿಸಲು ಜೆಡಿಎಸ್ ನವರು ಸುಳ್ಳು ಸುಳ್ಳು ಹೇಳುತ್ತಾರೆ, ಮುಂದಿನ ಚುನಾವಣೆಯಲ್ಲಿ ನಾವು 130 ರಿಂದ 150 ಸ್ಥಾನಗಳನ್ನು ಗೆಲ್ಲುತ್ತೇವೆ, ಹೀಗಿದ್ದಾಗ ಮೈತ್ರಿ ಮಾಡಿಕೊಳ್ಳುವ ಅವಶ್ಯಕತೆ ಎಲ್ಲಿ ಬರುತ್ತೆ? ಎಂದವರು ಹೇಳಿದ್ದಾರೆ.



















































