ಬೆಂಗಳೂರು: ರಾಜ್ಯಸಭೆಗೆ ರಾಜ್ಯದಿಂದ ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಮೂರು ಹಾಗೂ ವಿಧಾನಪರಿಷತ್ತಿನ ಎಲ್ಲ ನಾಲ್ಕು (ಮೇಲ್ಮನೆ) ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಮತ್ತು ಮೇಧಾವಿ ಬಸವರಾಜ ಹೊರಟ್ಟಿಯವರನ್ನು ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿಸಿದ್ದು, ಶಿಕ್ಷಕರ ಸಮಸ್ಯೆಗಳನ್ನು ಅರಿತವರು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದವರು. ಅವರನ್ನು ಗೆಲ್ಲಿಸಲು ಮನವಿ ಮಾಡಿದರು.
ಕೇಂದ್ರದಲ್ಲಿ ನರೇಂದ್ರ ಮೋದಿಯವರ ಆಡಳಿತದ ಮೂಲಕ ಜಗತ್ತೇ ಗುರುತಿಸುವ ಸ್ಥಾನಕ್ಕೆ ಭಾರತ ಏರಿದೆ. ಸ್ವಚ್ಛ ಭಾರತ ಮೂಲಕ ಶೌಚಾಲಯ, ಕಿಸಾನ್ ಸಮ್ಮಾನ್, 2 ಕೋಟಿ ಮನೆಗಳ ನಿರ್ಮಾಣ, ಮನೆ ಮನೆಗೆ ನಳ್ಳಿ ನೀರಿನ ಕೊಡುಗೆ, ಉಜ್ವಲದಡಿಯಲ್ಲಿ 8 ಕೋಟಿ ಜನರಿಗೆ ಸಿಲಿಂಡರ್ ಸಂಪರ್ಕ, ಕೋವಿಡ್ ಸಂಕಷ್ಟದ ಸ್ಪಂದನೆ- ಇವೆಲ್ಲವುಗಳಿಂದ ದೇಶದ ಒಳಗೆ ಮತ್ತು ವಿಶ್ವದೆಲ್ಲೆಡೆ ಅತ್ಯುತ್ತಮ ಸರಕಾರ ಎಂಬ ಕೀರ್ತಿಯನ್ನು ಮೋದಿಯವರ ಸರಕಾರ ಪಡೆದಿದೆ ಎಂದು ವಿವರಿಸಿದರು.
ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಕೋವಿಡ್ ಮತ್ತು ನೆರೆ ಸಂಕಷ್ಟದ ನಡುವೆ ರಾಜ್ಯ ಸರಕಾರವೂ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಹೆಚ್ಚುವರಿ 4 ಸಾವಿರ ರೂಪಾಯಿ, ವಿದ್ಯಾನಿಧಿ ಯೋಜನೆ ಸೇರಿದಂತೆ ಹತ್ತಾರು ಜನಪರ ಯೋಜನೆಗಳನ್ನು ಮಾಡಿದೆ. ಆದರೆ, ಕಾಂಗ್ರೆಸ್ ಆತಂಕಕ್ಕೆ ಒಳಗಾಗಿದೆ. ಅಧಿಕಾರವಂಚಿತ ಕಾಂಗ್ರೆಸ್ಸಿಗರಿಗೆ ಶಾಶ್ವತ ನಿರುದ್ಯೋಗದ ಭಯ ಕಾಡುತ್ತಿದ್ದು, ದಿನಕ್ಕೊಂದು ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಕಾಂಗ್ರೆಸ್ ಪಕ್ಷದ ಶಾಸಕರ ವಿರುದ್ಧ ನಡೆದ ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ಸೇರಿ ಹತ್ತಾರು ಗಲಭೆಗಳ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ತಿಳಿಸಿದರು.
ಶಿವಮೊಗ್ಗ, ಹುಬ್ಬಳ್ಳಿ ಗಲಭೆಗಳಿಗೆ ಪ್ರೇರಣೆ ನೀಡುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ಪ್ರಚೋದನೆ ಕೊಡುವ ಕಾರ್ಯವನ್ನು ಅದು ಮಾಡುತ್ತಿದೆ ಎಂದರು. ಚಡ್ಡಿ ಸುಡುವ ಕಾಂಗ್ರೆಸ್ ಆಂದೋಲನವನ್ನು ಟೀಕಿಸಿದ ಅವರು, ಸಂಘವು ರಾಷ್ಟ್ರಭಕ್ತಿಯ ಕಾರ್ಯವನ್ನು ಉದ್ದೀಪನಗೊಳಿಸುತ್ತಿದೆ. ವ್ಯಕ್ತಿತ್ವ ನಿರ್ಮಾಣದಿಂದ ರಾಷ್ಟ್ರ ನಿರ್ಮಿಸುವ ಕಾರ್ಯದಲ್ಲಿ ಅದು ತೊಡಗಿದೆ. ಅದೊಂದು ಸೇವಾ ಸಂಸ್ಥೆ. ಹಿಂದೆ ನೆಹರೂ ಮತ್ತು ಇಂದಿರಾ ಗಾಂಧಿ ಅವರೇ ಆರೆಸ್ಸೆಸ್ ನಿಷೇಧಿಸಿ ಕೈ ಸುಟ್ಟುಕೊಂಡಿದ್ದರು. ಈ ಬಾರಿ ಕಾಂಗ್ರೆಸ್ ಮತ್ತೆ ಕೈ ಸುಟ್ಟುಕೊಳ್ಳಲಿದೆ. ಈ ಬೆಂಕಿಯಡಿಯಲ್ಲಿ ಕಾಂಗ್ರೆಸ್ ಸುಟ್ಟುಹೋಗಲಿದೆ ಎಂದು ನುಡಿದರು.
ಡಿ.ಕೆ.ಶಿವಕುಮಾರ್- ಸಿದ್ರಾಮಣ್ಣನ ನಡುವಿನ ಕಾಂಗ್ರೆಸ್‍ನ ಆಂತರಿಕ ಜಗಳ ಈಗ ಬೀದಿ ಕಾಳಗವಾಗುತ್ತಿದೆ. ರಾಜ್ಯಸಭಾ, ಮೇಲ್ಮನೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಇದು ಪ್ರತಿಬಿಂಬಿತವಾಗಿತ್ತು. ಕಾಂಗ್ರೆಸ್ ತೊರೆಯುವವರ ಸಂಖ್ಯೆಯೂ ಹೆಚ್ಚಾಗಿದೆ. ಅಧಿಕಾರ ಹಿಡಿಯಲು ಗಲಭೆಗಳನ್ನು ಅದು ಪ್ರಚೋದಿಸುತ್ತಿದೆ ಎಂದರು.
ಇಡೀ ರಾಜ್ಯದಲ್ಲಿ ಬಿಜೆಪಿ ಪರ ಅಲೆ ಇದೆ. ನಮ್ಮ ಸರಕಾರಗಳ ಸಾಧನೆಗಳನ್ನು ಜನರಿಗೆ ತಿಳಿಸಲಾಗುತ್ತಿದೆ. ಇದು ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಪೂರಕ ಎಂದು ನುಡಿದರು. ಅಡ್ಡಮತ, ಕಳ್ಳಮತದ ಮೇಲೆ ನಂಬಿಕೆ ನಮಗಿಲ್ಲ. ನಮ್ಮಮೇಲೆ ವಿಶ್ವಾಸವಿಟ್ಟು ಹಾಕುವ ಮತಗಳ ಮೇಲೆ ನಮಗೆ ವಿಶ್ವಾಸವಿದೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು. ಇದೇ ಸಂದರ್ಭದಲ್ಲಿ ನಳಿನ್‍ಕುಮಾರ್ ಕಟೀಲ್ ಅವರು, ನರೇಂದ್ರ ಮೋದಿ ಸರಕಾರದ 8 ವರ್ಷಗಳ ಸಾಧನೆಯ ಕಿರುಹೊತ್ತಗೆ ಬಿಡುಗಡೆ ಮಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮತ್ತು ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.






















































