ಚಿಕ್ಕಬಳ್ಳಾಪುರ: ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಂದಿ ಗಿರಿಧಾಮದ ಭೋಗನಂದೀಶ್ವರ ದೇವಾಲಯದಲ್ಲಿ ಈ ವರ್ಷದಿಂದ ಮೈಸೂರು ದಸರಾ ರೀತಿಯಲ್ಲೇ ಶಿವೋತ್ಸವ ನಡೆಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಕರ್ನಾಟಕವನ್ನು ‘ಒಂದು ರಾಜ್ಯ ಹಲವು ಜಗತ್ತು’ ಎಂದು ಬಣ್ಣಿಸಲಾಗುತ್ತಿದೆ. ಅದೇ ರೀತಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯೂ ‘ಒಂದು ಜಿಲ್ಲೆ, ಹಲವು ಜಗತ್ತು’. ಪ್ರವಾಸಿ ತಾಣ, ದೇವಾಲಯ, ನದಿ, ಸರೋವರಗಳ ಜೊತೆ ಐತಿಹಾಸಿಕ ಸ್ಥಳಗಳು ಕೂಡ ಚಿಕ್ಕಬಳ್ಳಾಪುರದಲ್ಲಿವೆ. ನಂದಿ ಬೆಟ್ಟದಲ್ಲಿರುವ ಭೋಗನಂದೀಶ್ವರ ದೇವಸ್ಥಾನ ತನ್ನದೇ ಆದ ವಿಶಿಷ್ಠ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದರು.
ಮಹಾಶಿವರಾತ್ರಿ ದಿನ ನಂದೀ ಕ್ಷೇತ್ರದಲ್ಲಿ ವಿಭಿನ್ನ ಮತ್ತು ವೈಭವದ ಶಿವೋತ್ಸವ ಆಚರಿಸಲು ತೀರ್ಮಾನ ಮಾಡಲಾಗಿದೆ. ಇಡೀ ಜಿಲ್ಲೆಯ ಹಾಗೂ ನಾಡಿನ ಜನತೆಗೆ ಶಿವನ ಅನುಗ್ರಹ ಸಿಗಬೇಕು ಅನ್ನುವ ಆಶಯದಿಂದ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಭೋಗನಂದೀಶ್ವರ ದೇವಾಲಯ ಪ್ರಾಚೀನ ದೇವಾಲಯ. ಈ ಕ್ಷೇತ್ರ, ಕದಂಬರು, ಚೋಳರು, ಹೊಯ್ಸಳರು, ವಿಜಯನಗರದ ಆಳ್ವಿಕೆಯನ್ನು ಕೂಡ ಕಂಡಿದೆ. ಈ ಬಾರಿ ಜಿಲ್ಲಾಡಳಿತದ ಸಹಕಾರದಿಂದ ಶಿವೋತ್ಸವ ನಡೆಸಲಾಗುತ್ತದೆ. ಮುಂದಿನ ವರ್ಷದಿಂದ ಸರ್ಕಾರವೇ ಇದರ ನಿರ್ವಹಣೆ ಮಾಡಲಿದೆ ಎಂದರು.
ರಾಜ್ಯದಲ್ಲಿ ಮೈಸೂರು ಚಾಮುಂಡೇಶ್ವರಿ ಕ್ಷೇತ್ರವು ದಸರಾ ಆಚರಣೆಗೆ ಪ್ರಸಿದ್ಧಿ ಹೊಂದಿದ್ದರೆ, ಹಂಪಿ ಕೂಡ ಹಂಪಿ ಉತ್ಸವಕ್ಕೆ ಜನಪ್ರಿಯತೆ ಪಡೆದಿದೆ. ಬೆಂಗಳೂರಿನಲ್ಲಿ ಕರಗ ಉತ್ಸವ ವಿಶ್ವಖ್ಯಾತಿ ಪಡೆದಿದೆ. ಈ ವರ್ಷದಿಂದ ಆರಂಭವಾಗುವ ಶಿವೋತ್ಸವ ಕೂಡ ಇದೇ ರೀತಿಯ ಖ್ಯಾತಿಯನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿಯ ಶಿವೋತ್ಸವಕ್ಕೆ ಘನತೆವೆತ್ತ ರಾಜ್ಯಪಾಲರಾದ ಶ್ರೀ ಥಾವರ್ ಚಾಂದ್ ಗೆಹ್ಲೋಟ್, ಚಾಲನೆ ಕೊಡಲಿದ್ದಾರೆ. ಮುಖ್ಯಮಂತ್ರಿಗಳಿಗೆ ಕೂಡ ಆಹ್ವಾನ ನೀಡಲಾಗಿದೆ. ಅನೇಕ ಸಂತರು, ಗುರುಗಳು ಇದರಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಸಿರಿಗೆರೆಯ ಮಹಾಸ್ವಾಮಿಗಳು, ಸತ್ಯ ಸಾಯಿ ಸಂಸ್ಥೆಯ ಶ್ರೀ ಮಧುಸೂದನ್ ಗುರುಗಳು ಕೂಡ ಶಿವೋತ್ಸವಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಮಾರ್ಚ 1 ರ ಸಂಜೆ 6 ಗಂಟೆಗೆ ಆರಂಭವಾಗಿ, ಬೆಳಗ್ಗೆ ರಥೋತ್ಸವ ನಡೆಯುವ ತನಕ ನಿರಂತರವಾಗಿ ಸಾಂಸ್ಕೃತಿಕ, ಭಕ್ತಿ ಹಾಗೂ ಜಾಗರಣೆ ಕಾರ್ಯಕ್ರಮಗಳು ನಡೆಯಲಿವೆ. ರಾಷ್ಟ್ರೀಯ ಮಟ್ಟದ ಸಂಗೀತ, ನಾಟ್ಯ ಕಲಾವಿದರು, ಚಿತ್ರ ತಾರೆಯರು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ. ಸುಮಾರು 25 ಹೆಸರಾಂತ ವಿವಿಧ ತಂಡಗಳು ಭಾಗವಹಿಸಲಿವೆ. ನಗೆ ಹಬ್ಬ ಕೂಡ ಇರಲಿದೆ. ಜಾನಪದ ಕಲೆಗಳು, ಭರತ ನಾಟ್ಯ ಕೂಡ ಆಕರ್ಷಣೆಯಾಗಿರಲಿದೆ. ಮಧ್ಯಾಹ್ನ 1 ಗಂಟೆಯಿಂದ ಹಿಡಿದು, ಮುಂದಿನ ದಿನ ರಥೋತ್ಸವ ಆಗುವ ತನಕ ನಿರಂತರ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಹೇಳಿದರು.
ನಂದಿ ಬೆಟ್ಟದಲ್ಲಿ ದೀಪಾಲಂಕಾರ ಮಾಡಲಾಗುತ್ತದೆ. ಬೆಟ್ಟದಲ್ಲಿ ಲೇಸರ್ ಶೋ ಇರಲಿದೆ. ಸುಮಾರು 2 ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. 20 ರಿಂದ 25 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. 3 ಸಾವಿರ ಫೋರ್ ವ್ಹೀಲರ್ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 5 ಸಾವಿರ ದ್ವಿಚಕ್ರವಾಹನಗಳ ಪಾರ್ಕಿಂಗ್ ಗೆ ವ್ಯವಸ್ಥೆ ಕಲ್ಪಿಸಲಾಗುವುದು. ಊಟದ ವ್ಯವಸ್ಥೆಗೆ 25 ರಿಂದ 30 ಕೌಂಟರ್ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಸಚಿವರು ವಿವರಿಸಿದರು.
ದೇವಾಸ್ಥಾನದ ಆವರಣದಲ್ಲಿ 25 ರಿಂದ 40 ಮಳಿಗೆಗಳು ಸ್ಥಳೀಯ ವಸ್ತುಗಳ ಪ್ರದರ್ಶನಕ್ಕೆ ಸೀಮಿತವಾಗಿರಲಿದೆ. ಜಿಲ್ಲೆಯ ವಿಶೇಷತೆಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದರು.