ಬೆಂಗಳೂರು; ಮೇಕೆದಾಟು ಯೋಜನೆ ಕುರಿತು ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ನಿಲುವನ್ನು ತಿಳಿಸಬೇಕು. ಮೈತ್ರಿ ಮುಖ್ಯವೋ ಅಥವಾ ರಾಜ್ಯದ ಹಿತ ಮುಖ್ಯವೋ ಎಂಬುದನ್ನು ಬಹಿರಂಗಪಡಿಸಬೇಕು ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಒತ್ತಾಯಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೋವಿಡ್ ಸಮಯದಲ್ಲಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದರು. ತಮಿಳುನಾಡಿನ ಸಿಎಂ ಎಂ.ಕೆ.ಸ್ಟಾಲಿನ್ ತಮ್ಮ ಪ್ರಣಾಳಿಕೆಯಲ್ಲಿ ಮೇಕೆದಾಟು ಯೋಜನೆ ಜಾರಿಯಾಗಲು ಬಿಡಲ್ಲ ಎಂದು ಘೋಷಿಸಿದ್ದಾರೆ. ಅಂದು ಡಿ.ಕೆ.ಶಿವಕುಮಾರ್ ಮೇಕೆದಾಟುವಿನಲ್ಲಿ ಸ್ನಾನ ಮಾಡಿದ್ದರು. ಆದರೀಗ ಸ್ನಾನಕ್ಕಲ್ಲ, ಮುಖ ತೊಳೆಯಲು ಕೂಡ ನೀರಿಲ್ಲ ಎಂದರು.
ಬೆಂಗಳೂರಿನ ಜನರು ಕುಡಿಯಲು ನೀರಿಲ್ಲದೆ ವಲಸೆ ಹೋಗುತ್ತಿದ್ದಾರೆ. ಇಂತಹ ಸ್ಥಿತಿಯನ್ನು ಈವರೆಗೆ ನಾನಂತೂ ನೋಡಿಲ್ಲ. ಕಾಂಗ್ರೆಸ್ ನಾಯಕರು ಕೂಡಲೇ 136 ಶಾಸಕರನ್ನು ತಮಿಳುನಾಡಿಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರತಿಭಟನೆ ಮಾಡಲಿ. ಕರ್ನಾಟಕದ ಕಾಂಗ್ರೆಸ್ಸಿಗರಿಗೆ INDI ಅಲಯನ್ಸ್ ಮುಖ್ಯವೋ ಅಥವಾ ರಾಜ್ಯದ ಹಿತ ಮುಖ್ಯವೋ ಎಂಬುದನ್ನು ಈ ಮೂಲಕ ಸಾಬೀತುಪಡಿಸಬೇಕು. ಡಿಎಂಕೆ ಪ್ರಣಾಳಿಕೆ ಕುರಿತು ಸಿಎಂ ಸಿದ್ದರಾಮಯ್ಯನವರು ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಬೇಕು. ಮೇಕೆದಾಟು ಬಗ್ಗೆ ನಿಜವಾಗಿಯೂ ಕಾಳಜಿ ಇದೆಯೇ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.
ಡಿ.ಕೆ.ಶಿವಕುಮಾರ್ ಅವರು ಮೇಕದಾಟುವಿನಲ್ಲಿ ತರ್ಪಣ ಬಿಟ್ಟಿದ್ದರು. ಈ ಮೂಲಕ ರಾಜ್ಯದ ಜನರಿಗೆ ಅನ್ಯಾಯದ ತರ್ಪಣವನ್ನು ನೀಡಿದ್ದಾರೆ. ಕಾಂಗ್ರೆಸ್‌ಗೆ ಧೈರ್ಯವಿದ್ದರೆ ಡಿಎಂಕೆ ಪ್ರಣಾಳಿಕೆಯಿಂದ ಮೇಕೆದಾಟು ಅಂಶವನ್ನು ತೆಗೆದುಹಾಕಿಸಲು ಪ್ರಯತ್ನ ಮಾಡಲಿ. ಅಲ್ಲಿಯವರೆಗೂ ಕೇಂದ್ರ ಸರ್ಕಾರದ ಬಗ್ಗೆ ಆರೋಪ ಮಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದರು.