ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಡ್ರಾಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರವು 2026ರ ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆ ಆಗಲಿದೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ ಎಂಬ ವದಂತಿಗಳಿಗೆ ತೆರೆ ಬೀಳಿಸಿದ್ದು, ಪ್ರಸಿದ್ಧ ಚಲನಚಿತ್ರ ವಿಶ್ಲೇಷಕ ತರಣ್ ಆದರ್ಶ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ನಿರ್ಮಾಪಕರೊಂದಿಗೆ ಮಾತನಾಡಿದ ನಂತರ “ಚಿತ್ರವು ನಿಗದಿತ ವೇಳಾಪಟ್ಟಿಯಂತೆ ಸಾಗುತ್ತಿದೆ” ಎಂದು ದೃಢಪಡಿಸಿದ್ದಾರೆ.
ತರಣ್ ಆದರ್ಶ್ಅವರು ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದು, “ವದಂತಿಗಳನ್ನು ನಿಲ್ಲಿಸಿ! ಯಶ್ ಅವರ ಮುಂದಿನ ಚಿತ್ರ ‘ಟಾಕ್ಸಿಕ್’ ವಿಳಂಬವಾಗಿಲ್ಲ ಅಥವಾ ಮುಂದೂಡಲ್ಪಟ್ಟಿಲ್ಲ. ಬಿಡುಗಡೆ ದಿನಾಂಕ — ಮಾರ್ಚ್ 19, 2026 — ಸ್ಥಿರವಾಗಿದೆ. ಯುಗಾದಿ, ಗುಡಿ ಪಾಡ್ವಾ ಮತ್ತು ಈದ್ ಹಬ್ಬದ ವಾರಾಂತ್ಯಕ್ಕೆ ಇದು ಪರಿಪೂರ್ಣ ಸಮಯ. ಮುಂಬೈನಲ್ಲಿ ಯಶ್ ‘ರಾಮಾಯಣ’ ಚಿತ್ರೀಕರಣ ಮಾಡುತ್ತಿದ್ದ ಸಮಯದಲ್ಲೇ ಪೋಸ್ಟ್-ಪ್ರೊಡಕ್ಷನ್ ಪ್ರಾರಂಭವಾಗಿದೆ” ಎಂದಿದ್ದಾರೆ.
ಬೆಂಗಳೂರಿನಲ್ಲಿ ಚಿತ್ರಕ್ಕೆ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದ್ದು, ಜನವರಿ 2026ರಲ್ಲಿ ಪೂರ್ಣ ಪ್ರಮಾಣದ ಪ್ರಚಾರ ಅಭಿಯಾನ ಆರಂಭವಾಗಲಿದೆ. ಕೆವಿಎನ್ ಪ್ರೊಡಕ್ಷನ್ಸ್ ಸಾಮಾಜಿಕ ಜಾಲತಾಣದಲ್ಲಿ “ಇನ್ನು 140 ದಿನಗಳು ಬಾಕಿ! ಅವರ ಪಳಗಿಸದ ಪ್ರೆಸೆನ್ಸ್, ನಿಮ್ಮ ಅಸ್ತಿತ್ವದ ಬಿಕ್ಕಟ್ಟು. #ಟಾಕ್ಸಿಕ್ ದಿ ಮೂವಿ – 19-03-2026 ರಂದು ವಿಶ್ವಾದ್ಯಂತ ಬಿಡುಗಡೆ,” ಎಂದು ಕೌಂಟ್‌ಡೌನ್ ಪೋಸ್ಟ್ ಹಂಚಿಕೊಂಡಿದೆ.
ಚಿತ್ರವು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಅನೇಕ ಭಾರತೀಯ ಮತ್ತು ಅಂತರರಾಷ್ಟ್ರೀಯ ಭಾಷೆಗಳಲ್ಲಿ ಡಬ್ ಆಗಲಿದೆ. ಗೀತು ಮೋಹನ್ದಾಸ್ ನಿರ್ದೇಶನದಲ್ಲಿ, ವೆಂಕಟ್ ಕೆ. ನಾರಾಯಣ ಹಾಗೂ ಯಶ್ ಸಂಯುಕ್ತ ನಿರ್ಮಾಣದ ಈ ಸಿನಿಮಾ — ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ನಡಿ ಮೂಡಿ ಬಂದಿದೆ.
 
	    	



















































