ಬೆಂಗಳೂರು: ಮರಾಠ ಸಮುದಾಯದವರ ಮೀಸಲಾತಿ ಬೇಡಿಕೆಗೆ ರಾಜ್ಯ ಹಿಂದುಳಿದ ವರ್ಗದ ವರದಿ ಬಂದ ನಂತರ ಸಂವಿಧಾನದ ಚೌಕಟ್ಟಿನೊಳಗೆ ನ್ಯಾಯ ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕರ್ನಾಟಕ ಮರಾಠ ಅಭಿವೃದ್ಧಿ ನಿಗಮ ಹಾಗೂ ಫಲಾನುಭವಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು, ಮರಾಠ ಸಮುದಾಯದ 3 ಬಿ ಇಂದ 2 ಎ ಮೀಸಲಾತಿಯ ಬೇಡಿಕೆಗೆ ಸ್ಪಂದಿಸಿ, ಸಮುದಾಯಕ್ಕೆ ನ್ಯಾಯ ಒದಗಿಸುವ ಚಿಂತನೆ ಸರ್ಕಾರಕ್ಕಿದೆ. ಪ್ರಧಾನಿ ಮೋದಿಯವರು ರಾಜ್ಯದ ಹಿಂದುಳಿದ ವರ್ಗದವರಿಗೆ ಸಂವಿಧಾನತ್ಮಕವಾದ ಸ್ಥಾನಮಾನವನ್ನು ದೊರಕಿಸಿಕೊಟ್ಟಿದ್ದಾರೆ. ಈ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು. ಮೀಸಲಾತಿಯ ಬೇಡಿಕೆ ಇಟ್ಟಿರುವ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಲು ಸರ್ಕಾರ ಬದ್ಧವಾಗಿದೆ. ಮರಾಠ ಸಮುದಾಯದ ಮಹನೀಯರ ಸಮಾಧಿಗಳು, ಐತಿಹಾಸಿಕ ಕುರುಹುಗಳ ಅಭಿವೃದ್ಧಿಗಾಗಿ ಡಿಪಿಆರ್ ಸಿದ್ಧಪಡಿಸಲು 10 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಸಂತ ರಾಮದಾಸ್, ತುಕಾರಂ, ಏಕನಾಥ್ ಅವರ ಆದರ್ಶಗಳು ಎಲ್ಲ ಕಾಲದಲ್ಲಿಯೂ ಪ್ರಭಾವವನ್ನು ಬೀರುತ್ತದೆ. ಮರಾಠ ಸಮುದಾಯದ ಗೌರವವನ್ನು, ಅಸ್ಮಿತೆಯನ್ನು ಉಳಿಸಲಾಗುವುದು ಎಂದು ತಿಳಿಸಿದರು.
ಕಾರವಾರದಿಂದ ಬೀದರ್ ವರೆಗೂ ಬಹುತೇಕ ಗಡಿ ಭಾಗಗಳಲ್ಲಿ ಮರಾಠಾ ಸಮುದಾಯ ನೆಲೆಸಿದೆ. ಈ ಗಡಿ ಭಾಗಗಳ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಗಡಿಭಾಗದ ಪ್ರತಿಯೊಂದ ಗ್ರಾಮಪಂಚಾಯತಿಗಳ ಸಮಗ್ರ ಅಭಿವೃದ್ಧಿ ಮಾಡುವ ತೀರ್ಮಾನ ಆಯವ್ಯಯದಲ್ಲಿ ಮಾಡಲಾಗಿದೆ. ಗಡಿಭಾಗದ ಸಂಪರ್ಕ ರಸ್ತೆ ಕಾಮಗಾರಿಗಳನ್ನು , ಗಡಿ ಪ್ರಾಧಿಕಾರಕ್ಕೆ ಹೆಚ್ಚು ಅನುದಾನವನ್ನು ಕೆಲವೇ ದಿನಗಳಲ್ಲಿ ಒದಗಿಸಲಾಗುವುದು ಎಂದರು.
ಕರ್ನಾಟದಲ್ಲಿ ಈ ಸಮುದಾಯ ಮುಖ್ಯವಾಹಿನಿಯಲ್ಲಿ ಬೆರೆತಿದೆ. ಕರ್ನಾಟಕದ ಮರಾಠಾ ಸಮುದಾಯ ಕನ್ನಡಿಗರಾಗಿ ಮುಂದುವರೆಯುತ್ತದೆ ಎನ್ನುವ ಬಗ್ಗೆ ಎರಡು ಮಾತಿಲ್ಲ. ಮರಾಠ ಅಭಿವೃದ್ಧಿ ನಿಗಮದಿಂದ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ರೈತರಿಂದ ಹಿಡಿದು, ಯುವಕರಿಗೆ ಸ್ವಯಂ ಉದ್ಯೋಗ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಿ 100 ಕೋಟಿ ರೂ.ಅನುದಾನವನ್ನು ಒದಗಿಸಲಾಗಿದೆ. ಈ ಮೊತ್ತವನ್ನು ಸಮರ್ಪಕವಾಗಿ, ನ್ಯಾಯಸಮ್ಮತವಾಗಿ ಸಮುದಾಯದ ಬಡ ವಿದ್ಯಾರ್ಥಿಗಳು, ರೈತರು ಹಾಗೂ ಮಕ್ಕಳಿಗೆ ವಿನಿಯೋಗಿಸಬೇಕು. ಇದನ್ನು ಪೂರ್ಣಪ್ರಮಾಣದಲ್ಲಿ ಬಳಸಿ ಪುನ: ಹೆಚ್ಚಿನ ಅನುದಾನವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದರು.
ಉತ್ತಮ ಚರಿತ್ರೆ ಇರುವ ದೇಶಕ್ಕೆ ಉತ್ತಮ ಭವಿಷ್ಯವಿರುತ್ತದೆ. ಐದು ಸಾವಿರ ವರ್ಷಗಳ ದೇಶದ ಇತಿಹಾಸದಲ್ಲಿ ಅತ್ಯಂತ ಶ್ರೇಷ್ಠ ಮಿನುಗು ತಾರೆ ಛತ್ರಪತಿ ಶಿವಾಜಿ ಮಹಾರಾಜರು. ಅಂದಿನ ರಾಜಕೀಯ ಚರಿತ್ರೆಯನ್ನು ಬದಲಾಯಿಸಿದ ಶಿವಾಜಿ ಮಹಾರಾಜರು ಧೈರ್ಯ, ಶೌರ್ಯವಂತರಾಗಿದ್ದರು. ಮೊಘಲ್ ಸಾಮ್ರಾಜ್ಯವನ್ನು ಹೊಡೆದೋಡಿಸಿ, ಹಿಂದೂ ಸಾಮ್ರಾಜ್ಯ ಸ್ಥಾಪಿಸಿದ ಶ್ರೇಯಸ್ಸು ಶಿವಾಜಿ ಮಹಾರಾಜ್ ಅವರಿಗೆ ಸೇರುತ್ತದೆ. ಚರಿತ್ರೆಯಲ್ಲಿ ಅವರಿಗೆ ವಿಶಿಷ್ಟ ಸ್ಥಾನವಿದೆ. ಅಂತಹ ಸಮುದಾಯಕ್ಕೆ ಸೇರಿದವರು ಭಾಗ್ಯವಂತರು ಎಂದರು.
ಮರಾಠ ಸಮುದಾಯಕ್ಕೆ ಚರಿತ್ರೆ ಇದೆ. ಆಧುನಿಕ ಸವಾಲುಗಳನ್ನು ಈ ದೇಶದ ಅಖಂಡತೆ, ಏಕತೆಯಿಂದ ದೇಶವನ್ನು , ಶಕ್ತಿ ಪರ್ವವಾಗಿ ಪರಿವರ್ತನೆ ಮಾಡುವ ಕಾಲದಲ್ಲಿ ಮರಾಠಿಗರ ಪಾತ್ರ ದೊಡ್ಡದಿದೆ. ಪ್ರಧಾನಿ ಮೋದಿಯವರು 75 ವರ್ಷ ಅಮೃತ ಮಹೋತ್ಸವದ ಕಾಲದಲ್ಲಿ ಇಡೀ ದೇಶವನ್ನು ಒಂದುಗೂಡಿಸಿದ್ದಾರೆ. ಜಗತ್ತಿನಲ್ಲಿ ಶ್ರೇಷ್ಠ ದೇಶವನ್ನಾಗಿ ಮಾಡಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಅಂದರೆ ಸ್ವತಂತ್ರ ದೊರಕಿ 100 ವರ್ಷಗಳಾಗುವ ಸಂದರ್ಭವನ್ನು ಅಮೃತ ಕಾಲವೆಂದು ಕರೆದಿದ್ದಾರೆ. ಅಮೃತ ಕಾಲವನ್ನು ಸೃಷ್ಟಿಸುವಲ್ಲಿ ನಿಮ್ಮ ನಮ್ಮೆಲ್ಲರ ಪಾತ್ರ ದೊಡ್ಡದಿದೆ. ಈ ಸಮಾಜದ ಅಭಿವೃದ್ಧಿ ದೇಶದ ಅಭಿವೃದ್ಧಿ. ಈ ಸಮಾಜವನ್ನು ಗಟ್ಟಿಗೊಳಿಸಿದರೆ, ಈ ಸಮಾಜ ದೇಶವನ್ನು ಗಟ್ಟಿಗೊಳಿಸುತ್ತದೆ. ಈ ಧ್ಯೇಯದಿಂದ ನಾವು ಕೆಲಸ ಮಾಡುತ್ತಿದ್ದೇವೆ. ಈ ವಿಚಾರಗಳಿಂದಲೇ ನಮ್ಮ ನಾಯಕರಾದ ಬಿ.ಎಸ್.ಯಡಿಯೂರಪ್ಪನವರು ಮರಾಠಾ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದರು ಎಂದರು.


















































