ನವದೆಹಲಿ: ದೇಶದಾದ್ಯಂತ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆ (ಪಿಐಎಲ್)ಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಜೋಯ್ಮಲ್ಯ ಬಾಗ್ಚಿ ಅವರ ಪೀಠವು ಈ ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಲು ನಿರಾಕರಿಸಿ, ಅರ್ಜಿದಾರರು ಈ ವಿಷಯವನ್ನು ಭಾರತ ಚುನಾವಣಾ ಆಯೋಗ (ಇಸಿಐ)ದ ಮುಂದೆ ಎತ್ತಿಕೊಳ್ಳುವಂತೆ ಸೂಚಿಸಿತು.
ಅರ್ಜಿದಾರರ ಪರ ವಕೀಲರು, ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಕುರಿತು ಈಗಾಗಲೇ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರೂ, ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಾದಿಸಿದರು. ಆದರೆ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆ ಅಗತ್ಯವಿಲ್ಲ ಎಂದು ತೀರ್ಮಾನಿಸಿ, ಅರ್ಜಿದಾರರು ಕಾನೂನಿನಡಿ ಲಭ್ಯವಿರುವ ಮಾರ್ಗಗಳನ್ನು ಅನುಸರಿಸಬಹುದು ಎಂದು ತಿಳಿಸಿತು.
ಈ ಪಿಐಎಲ್‌ನಲ್ಲಿ “ಒಬ್ಬ ವ್ಯಕ್ತಿ, ಒಂದು ಮತ” ಎಂಬ ಸಂವಿಧಾನಿಕ ತತ್ವವನ್ನು ಕಾಯ್ದುಕೊಳ್ಳಲು ತುರ್ತು ನ್ಯಾಯಾಂಗ ಹಸ್ತಕ್ಷೇಪ ಅಗತ್ಯವಿದೆ ಎಂದು ವಾದಿಸಲಾಗಿತ್ತು. ಅರ್ಜಿಯ ಪ್ರಕಾರ, ಒಂದೇ ವ್ಯಕ್ತಿಯ ಹೆಸರು ಹಲವು ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿರುವುದು ಕಂಡುಬಂದಿದ್ದು, ಇದು ಸಂವಿಧಾನದ ಉಲ್ಲಂಘನೆ ಎಂದು ಹೇಳಲಾಗಿದೆ.
ವಕೀಲ ಕೌಸರ್ ರಜಾ ಫರೀದಿ ಅವರ ಮೂಲಕ ಸಲ್ಲಿಸಲಾದ ಈ ಅರ್ಜಿಯಲ್ಲಿ, ಬೆಂಗಳೂರಿನ ಮಹಾದೇವಪುರ, ಲಕ್ನೋ ಪೂರ್ವ ಹಾಗೂ ಮುಂಬೈನ ಜೋಗೇಶ್ವರಿ ಪೂರ್ವ ಕ್ಷೇತ್ರಗಳಲ್ಲಿ ಒಂದೇ ವ್ಯಕ್ತಿಯ ಹೆಸರು ನೋಂದಾಯಿತಾಗಿದೆ ಎಂದು ಆರೋಪಿಸಲಾಗಿದೆ. ಇದೇ ರೀತಿ ಮಹಾದೇವಪುರ ಮತ್ತು ವಾರಣಾಸಿ ಕಂಟೋನ್ಮೆಂಟ್ ಕ್ಷೇತ್ರಗಳಲ್ಲಿ ಮತ್ತೊಬ್ಬ ವ್ಯಕ್ತಿಯ ಹೆಸರು ಕಾಣಿಸಿಕೊಂಡಿರುವುದನ್ನೂ ಉಲ್ಲೇಖಿಸಲಾಗಿದೆ.
ಅರ್ಜಿ ಪ್ರಕಾರ, “ಒಬ್ಬ ವ್ಯಕ್ತಿಗೆ ನೀಡುವ ಮತದಾರರ ಗುರುತು ಸಂಖ್ಯೆ (EPIC) ಅನನ್ಯವಾಗಿರಬೇಕಾದರೂ, ಒಂದೇ ವ್ಯಕ್ತಿ ನಾಲ್ಕು ಕ್ಷೇತ್ರಗಳಲ್ಲಿ ನೋಂದಾಯಿಸಲ್ಪಟ್ಟಿರುವುದು ಕಂಡುಬಂದಿದೆ. ಇದು ಕಾನೂನಿನ ನೇರ ಉಲ್ಲಂಘನೆಯಾಗಿದೆ” ಎಂದು ಹೇಳಲಾಗಿದೆ.
ಅದೇ ವೇಳೆ, ಮಹಾದೇವಪುರ ಕ್ಷೇತ್ರದಲ್ಲೇ ಸುಮಾರು 10,652 ಮತದಾರರ ವಿವರಗಳಲ್ಲಿ ಒಂದೇ ಮನೆ ಸಂಖ್ಯೆ ಅಥವಾ ತಂದೆಯ ಹೆಸರಿನಂತಹ ಸಾದೃಶ್ಯಗಳು ಕಂಡುಬಂದಿದ್ದು, ಸುಮಾರು 40,000 ಅಮಾನ್ಯ ಮತ್ತು 10,000ಕ್ಕೂ ಹೆಚ್ಚು ನಕಲಿ ನಮೂದುಗಳಿವೆ ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಮಹಾರಾಷ್ಟ್ರದ ಚಂದ್ರಾಪುರ ಕ್ಷೇತ್ರದಲ್ಲಿ “ಒಂದೇ ವಿಳಾಸದಲ್ಲಿ 80 ಮತದಾರರ ಹೆಸರುಗಳಿವೆ, ಆದರೆ ಅಲ್ಲಿ ಈಗ ಯಾರೂ ವಾಸಿಸುತ್ತಿಲ್ಲ” ಎಂಬ ಉದಾಹರಣೆಯನ್ನೂ ಅರ್ಜಿಯಲ್ಲಿ ನೀಡಲಾಗಿದೆ.
ಮತದಾರರ ಪಟ್ಟಿಯಲ್ಲಿ ಅನುಮಾನಾಸ್ಪದ ಸೇರ್ಪಡೆ ಮತ್ತು ಅಳಿಸುವಿಕೆಗಳ ಕುರಿತು ಕರ್ನಾಟಕದ ಕಲಬುರಗಿಯ ಚುನಾವಣಾ ಅಧಿಕಾರಿಯೊಬ್ಬರು ದಾಖಲಿಸಿದ ಎಫ್‌ಐಆರ್‌ನನ್ನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. “ಸಿಐಡಿ ಸುಮಾರು 20 ಬಾರಿ ಚುನಾವಣಾ ಆಯೋಗದಿಂದ ಸ್ಪಷ್ಟೀಕರಣ ಕೇಳಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ಪಿಐಎಲ್‌ನಲ್ಲಿ ಹೇಳಿದೆ.
ಮತದಾರರ ಪಟ್ಟಿಯ ಈ ಅಕ್ರಮಗಳು ಭಾರತದ ಸಂವಿಧಾನದ ವಿಧಿ 14, 21, 324 ಮತ್ತು 326ರ ಉಲ್ಲಂಘನೆಯಾಗಿವೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. “ಈ ರೀತಿಯ ಕುಶಲತೆಗಳು ಸಮಾನತೆ, ಪ್ರಜಾಪ್ರಭುತ್ವ ಹಾಗೂ ಮುಕ್ತ ಮತ್ತು ನ್ಯಾಯಯುತ ಚುನಾವಣೆಯ ಮೂಲ ಸಿದ್ಧಾಂತಗಳನ್ನು ಹಾನಿಗೊಳಿಸುತ್ತವೆ” ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಹಿಂದಿನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಪಿಐಎಲ್, “ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ಸಂವಿಧಾನದ ಮೂಲ ರಚನೆಯ ಭಾಗವಾಗಿವೆ” ಎಂಬ ಸುಪ್ರೀಂ ಕೋರ್ಟ್‌ನ ಪೂರ್ವ ತೀರ್ಪುಗಳನ್ನು ನೆನಪಿಸಿದೆ.