ಬೆಂಗಳೂರು: ದೇಶದ ನಿರ್ಮಾಣಕ್ಕಾಗಿ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಹಾಕಿರುವ ಭದ್ರ ಬುನಾದಿಗೆ ಬೆಂಗಳೂರು ಸಾಕ್ಷಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಭವನದಲ್ಲಿ ಗುರುವಾರ ನಡೆದ ಜವಾಹರ್ ಲಾಲ್ ನೆಹರೂ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಾತನಾಡಿ, ನೆಹರೂ ಅವರ ಕೊಡುಗೆ ಹಾಗೂ ಮಕ್ಕಳ ಏಳಿಗೆಗೆ ಕಾಂಗ್ರೆಸ್ ಪಕ್ಷದ ಕೊಡುಗೆಗಳನ್ನು ಸ್ಮರಿಸಿದರು.
“ನೆಹರೂ ಅವರು ಬೆಂಗಳೂರಿನಲ್ಲಿ ಸಾರ್ವಜನಿಕ ಉದ್ದಿಮೆಗಳು ಹೆಚ್ಎಎಲ್, ಐಟಿಐ, ಬಿಇಎಂಎಲ್, ಬಿಇಎಲ್, ಇಸ್ರೋ ಸೇರಿದಂತೆ ಅನೇಕ ಉದ್ದಿಮೆಗಳು ಆರಂಭಿಸಿದರು. ಇಲ್ಲಿರುವ ಮಾನವ ಸಂಪನ್ಮೂಲ, ಗುಣಮಟ್ಟದ ಶಿಕ್ಷಣದ ಮೇಲೆ ವಿಶೇಷ ಆದ್ಯತೆ ನೀಡಿದರು. ಅವರು ಹಾಕಿಕೊಟ್ಟ ಅಡಿಪಾಯದಲ್ಲಿ ನಾವು ಇಂದು ಈ ದೇಶ ಕಟ್ಟುತ್ತಿದ್ದೇವೆ ಎಂದರು.
ಮಕ್ಕಳಿಗೆ ಶಿಕ್ಷಣ ಸಿಗಬೇಕು, ಮಕ್ಕಳು ಶಾಲೆಯಿಂದ ವಿಮುಖರಾಗಬಾರದು ಎಂದು ಎಸ್ ಎಂ ಕೃಷ್ಣ ಅವರ ಅವಧಿಯಲ್ಲಿ ಬಿಸಿಯೂಟ ಕಾರ್ಯಕ್ರಮ ನೀಡಲಾಯಿತು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಶಾಲಾ ಮಕ್ಕಳಿಗೆ ಶೂ, ಸಾಕ್ಸ್, ಕ್ಷೀರಭಾಗ್ಯ, ಮೊಟ್ಟೆ ಭಾಗ್ಯ ನೀಡಿ ಪೌಷ್ಠಿಕತೆ ಹೆಚ್ಚಿಸಿದರು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಅಂಗನವಾಡಿ ಕಾರ್ಯಕ್ರಮ ಮಾಡಲಾಯಿತು. ಹೀಗೆ ಕಾಂಗ್ರೆಸ್ ಸರ್ಕಾರ ಸದಾ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿದೆ ಎಂದು ಡಿಕೆಶಿ ತಿಳಿಸಿದರು.
ಈ ವರ್ಷದಿಂದ ಗ್ರಾಮೀಣ ಭಾಗದಲ್ಲಿ ಪಂಚಾಯಿತಿ ಮಟ್ಟದಲ್ಲಿ 2 ಸಾವಿರ ಸಿಎಸ್ ಆರ್ ಶಾಲೆಗಳನ್ನು ಆರಂಭಿಸಲು ಮುಂದಾಗಿದ್ದೇವೆ. ಇದಕ್ಕಾಗಿ ನನ್ನನ್ನು ಸೇರಿದಂತೆ ನಾಲ್ಕೈದು ಮಂತ್ರಿಗಳಿಗೆ ಮುಖ್ಯಮಂತ್ರಿಗಳು ಜವಾಬ್ದಾರಿ ನೀಡಿದ್ದು, ಈಗಾಗಲೇ 50 ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಹೀಗೆ ಸರ್ಕಾರ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಅವರು, ಜವಾಹರ್ ಲಾಲ್ ನೆಹರೂ ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಣೆ ಮಾಡಲಾಗುತ್ತದೆ. ಈ ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಹೊಸ ಘಟಕ ಆರಂಭಿಸಲಾಗಿದೆ. ಹೊಸ ಪೀಳಿಗೆಗೆ ಕಾಂಗ್ರೆಸ್ ಪಕ್ಷದ ಆಚಾರ ವಿಚಾರ, ಜಾತ್ಯಾತೀತ ತತ್ವವನ್ನು ಯುವ ಪೀಳಿಗೆಗಳಿಗೆ ಸಣ್ಣ ವಸ್ಸಿನಿಂದಲೇ ಅರಿವು ಮೂಡಿಸಲು ಜವಾಹರ್ ಲಾಲ್ ಬಾಲ ಮಂಚ್ ಅನ್ನು ಆರಂಭಿಸಲಾಗಿದೆ. ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್ ನಂತೆ ಇದು ಕೂಡ ಹೊಸ ಘಟಕವಾಗಿದೆ. ದೇಶದಾದ್ಯಂತ ಸಂವಿಧಾನ, ಜಾತ್ಯಾತೀತ ತತ್ವ ಹಾಗೂ ಪಕ್ಷದ ಸಂವಿಧಾನದ ಬಗ್ಗೆ ಮಾಹಿತಿ ನೀಡಲಾಗುವುದು. ಪಕ್ಷದ ಎಲ್ಲಾ ನಾಯಕರು ತಮ್ಮ ವ್ಯಾಪ್ತಿಯಲ್ಲಿ ಈ ಘಟಕಕ್ಕೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು.
ವಿಧಾನಸೌಧದಲ್ಲಿ ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸರ್ಕಾರಿ ಶಾಲಾ ಮಕ್ಕಳ ಜತೆಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿವಿಧ ಶಾಲೆಗಳ 300 ಶಾಲಾ ಮಕ್ಕಳೊಂದಿಗೆ ನಾನು ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಸಂವಾದ ಮಾಡಿದೆವು. ಮಕ್ಕಳ ಆಸೆ, ಆಲೋಚನೆಗಳ ಬಗ್ಗೆ ಚರ್ಚೆ ಮಾಡಿದೆವು ಎಂದವರು ತಿಳಿಸಿದರು.