ಪಾಟ್ನಾ: ನೇಪಾಳದಲ್ಲಿ ಭಾರಿ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಬಿಹಾರ ಮತ್ತೆ ತೀವ್ರ ಪ್ರವಾಹದ ಕಾಟ ಅನುಭವಿಸುತ್ತಿದೆ. ಭಾಗಲ್ಪುರದಿಂದ ಬೇಗುಸರಾಯ್, ಖಗಾರಿಯಾ, ಮಾಧೇಪುರದವರೆಗೆ ತಗ್ಗು ಪ್ರದೇಶಗಳ ನಿವಾಸಿಗಳು ಮನೆ ಬಿಟ್ಟು ಎತ್ತರ ಪ್ರದೇಶಗಳಿಗೆ ತೆರಳಿದ್ದಾರೆ. ಕೆಲವರು ದೋಣಿಗಳಲ್ಲೇ ವಾಸಿಸುತ್ತಿದ್ದಾರೆ.
ಬೇಗುಸರಾಯ್ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಘಟನೆಗಳಲ್ಲಿ ತಾಯಿ–ಮಗಳು ಸೇರಿ ಎಂಟು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಗಂಗಾ ನದಿ, ಕೊಳಗಳು ಹಾಗೂ ಪ್ರವಾಹಪೀಡಿತ ಪ್ರದೇಶಗಳಲ್ಲಿ ಈ ಘಟನೆಗಳು ಸಂಭವಿಸಿದೆ.
ಭಾಗಲ್ಪುರದ ಧನಹಾ ಟೋಲಾದಲ್ಲಿ ವಂದನಾ ದೇವಿ (26) ತಮ್ಮ 7 ವರ್ಷದ ಮಗಳು ಅನನ್ಯಾಳನ್ನು ಉಳಿಸಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬಿಜ್ವಿಯನ್ ಗ್ರಾಮದ ರೈತ ಧೀರಜ್ ಕುಮಾರ್ ಸಿಂಗ್ (32) ಮೇವು ತರಲು ಹೋಗಿ ಕೊಚ್ಚಿಹೋದರು. ಪೂರ್ವ ಚಂಪಾರಣ್‌ನ ಚಾಕಿಯಾದಲ್ಲಿ ಗೌತಮ್ ಕುಮಾರ್ (21) ಸ್ನಾನ ಮಾಡುವಾಗ ಸಾವನ್ನಪ್ಪಿದರು. ಬೇಗುಸರಾಯ್‌ನ ಬಚ್ವಾರಾದಲ್ಲಿ ಅಶೋಕ್ ಯಾದವ್ (45) ದೋಣಿ ಸೇವೆಗಳ ಕೊರತೆಯಿಂದಾಗಿ ನಡೆದುಕೊಂಡು ಮನೆಗೆ ತೆರಳುವಾಗ ಮುಳುಗಿ ಮೃತಪಟ್ಟರು. ಸಾಹೇಬ್‌ಪುರ್ ಕಮಲ್‌ನಲ್ಲಿ ಅಂಜಲಿ ಕುಮಾರಿ (2) ನೀರಿನಲ್ಲಿ ಅಲೆದಾಡಿ ಸಾವನ್ನಪ್ಪಿದರು. ಮತಿಹಾನಿಯಲ್ಲಿ ಜಗದೀಶ್ ಸಿಂಗ್ (83) ನದಿಗೆ ಜಾರಿ ಮುಳುಗಿ ಮೃತಪಟ್ಟಿದ್ದಾರೆ.
ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆಯ ಅಧಿಕಾರಿಯೊಬ್ಬರ ಪ್ರಕಾರ, ಮೃತರ ನಿಖರ ಸಂಖ್ಯೆ ಇನ್ನೂ ಲಭ್ಯವಾಗಿಲ್ಲ. “ಸಂಖ್ಯೆ ಇನ್ನಷ್ಟು ಹೆಚ್ಚಿರಬಹುದು” ಎಂದು ಅವರು ಹೇಳಿದರು.
ಖಗಾರಿಯಾ ಜಿಲ್ಲೆ ಅತ್ಯಂತ ಹಾನಿಗೊಳಗಾಗಿದೆ. ಗಂಗಾ, ಗಂಡಕ್, ಬಾಗ್ಮತಿ ನದಿಗಳ ನೀರಿನ ಮಟ್ಟ ಏರಿಕೆಯಿಂದ ಅಪಾರ ಕೃಷಿಭೂಮಿಗಳು ಮುಳುಗಿ ಸಾವಿರಾರು ಜನರು ಮನೆ ತೊರೆದಿದ್ದಾರೆ. ಭಾಗಲ್ಪುರದಲ್ಲಿ ಗಂಗಾ ನದಿ ಅಪಾಯದ ಮಟ್ಟಕ್ಕಿಂತ 80 ಸೆಂ.ಮೀ ಎತ್ತರದಲ್ಲಿ ಹರಿಯುತ್ತಿದೆ. ತಿಲ್ಕಾ ಮಾಂಝಿ ವಿಶ್ವವಿದ್ಯಾಲಯ ಆವರಣಕ್ಕೂ ಪ್ರವಾಹದ ನೀರು ನುಗ್ಗಿದ್ದು, ಸೆನೆಟ್ ಹಾಲ್ ಹಾಗೂ ಆಡಳಿತ ಭವನ ಸೊಂಟ ಮಟ್ಟದವರೆಗೆ ಮುಳುಗಿದೆ.
ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಪ್ರವಾಹದಿಂದ 230 ಪಂಚಾಯತ್‌ಗಳ 12.58 ಲಕ್ಷ ಜನರು ಬಾಧಿತರಾಗಿದ್ದಾರೆ. ಪರಿಹಾರ ಕಾರ್ಯಕ್ಕೆ 1,000 ಕ್ಕೂ ಹೆಚ್ಚು ದೋಣಿಗಳು ನಿಯೋಜನೆಯಾಗಿದ್ದು, ಎನ್‌ಡಿಆರ್‌ಎಫ್‌ನ 14 ತಂಡಗಳು ಕಟ್ಟೆಚ್ಚರದಲ್ಲಿವೆ. ದರ್ಭಾಂಗ, ಸುಪೌಲ್, ಮೋತಿಹಾರಿ, ನಳಂದ, ಪಾಟ್ನಾದಲ್ಲಿ ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಇನ್ನೂ ಎಂಟು ತಂಡಗಳು ಮುಖ್ಯ ಕಚೇರಿಯಲ್ಲಿ ಸಿದ್ಧವಾಗಿವೆ. “ಯಾವಾಗ ಬೇಕಾದರೂ ನಿಯೋಜಿಸಲು ಸಿದ್ಧವಿದ್ದೇವೆ” ಎಂದು ಎನ್‌ಡಿಆರ್‌ಎಫ್ 9ನೇ ಬಟಾಲಿಯನ್ ಕಮಾಂಡೆಂಟ್ ಸುನಿಲ್ ಕುಮಾರ್ ಸಿಂಗ್ ಹೇಳಿದರು.