ಬೆಂಗಳೂರು: ಬಿಟ್ ಕಾಯಿನ್ ಹಗರಣದ ಕುರಿತು ಪ್ರಸ್ತಾಪ ಮಾಡುತ್ತಿರುವವರು ವಾಸ್ತವವಾಗಿ ಹಗರಣ ಏನೆಂದು ನಿಖರವಾಗಿ ತಿಳಿಸಲಿ. ಇದನ್ನು ಸಾಬೀತು ಪಡಿಸುವ ದಾಖಲೆಗಳನ್ನು ಈಗಾಗಲೇ ಪ್ರಕರಣ ತನಿಖೆ ನಡೆಸುತ್ತಿರುವ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿ, ಆರೋಪಗಳನ್ನು ಸಾಬೀತು ಪಡಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಗುಜರಾತ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿರುವ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ಸನ್ಮಾನ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರತಿದಿನ ಈ ವಿಷಯದ ಕುರಿತು ಪ್ರತಿಕ್ರಿಯೆ ನೀಡಬಯಸುವುದಿಲ್ಲ. ಈ ಕುರಿತು ಆರೋಪಗಳನ್ನು ಮಾಡುತ್ತಿರುವವರು ಹಗರಣ ಏನು ಹಾಗೂ ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ತಿಳಿಸಲಿ. ಈಗಾಗಲೇ 8-9 ತಿಂಗಳ ಹಿಂದೆಯೇ ಪ್ರಕರಣವನ್ನು ಇಡಿ ಗೆ ಹಸ್ತಾಂತರಿಸಲಾಗಿದೆ. ಅಂತರರಾಷ್ಟ್ರೀಯ ವಿಷಯವಾಗಿರುವುದರಿಂದ ಸಿಬಿಐನ ಇಂಟರ್ ಪೋಲ್ ವಿಭಾಗಕ್ಕೂ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಈ ಹಗರಣದ ಮೊತ್ತದ ಬಗ್ಗೆ ವಿಭಿನ್ನ ಹೇಳಿಕೆಗಳು ಬರುತ್ತಿವೆ. ಇದಕ್ಕೆ ಯಾವುದೇ ದಾಖಲೆಗಳ ಆಧಾರವಿಲ್ಲ. ನಮ್ಮ ಸರ್ಕಾರ ಈ ವಿಷಯದಲ್ಲಿ ಮುಕ್ತವಾಗಿದೆ. ಇದರಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೂ ಇಲ್ಲ. ನಾವು ಯಾರೂ ಭಾಗಿಯಾಗಿಲ್ಲ. ಅವರ ಬಳಿ ಇರುವ ಮಾಹಿತಿಯನ್ನು ತನಿಖಾ ಸಂಸ್ಥೆಗಳಿಗೆ ನೀಡಲಿ. ತನಿಖೆಯಾಗಲಿ; ಸತ್ಯ ಹೊರಬರಲಿ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಇದರಿಂದ ನಿಮ್ಮ ಹುದ್ದೆಗೆ ಸಂಚಕಾರ ಬರಲಿದೆಯೇ ಎಂಬ ಪ್ರತಿಪಕ್ಷಗಳ ಹೇಳಿಕೆಯ ಕುರಿತು ಪ್ರಶ್ನಿಸಿದಾಗ ಇದು ರಾಜಕೀಯ ಪ್ರೇರಿತ ಎಂದು ಅವರು ನುಡಿದರು.