ಬೆಳಗಾವಿ: ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಬೆಳಗಾವಿಯಲ್ಲಿ ಪೊಲೀಸರು ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿರುವುದನ್ನು ಪ್ರತಿಪಕ್ಷ ಬಿಜೆಪಿ ನಾಯಕರು ಖಂಡಿಸಿದ್ದಾರೆ. ಪೊಲೀಸರ ಕ್ರಮ ಅತ್ಯಂತ ಖಂಡನೀಯವಾಗಿದ್ದು, ರಾಜ್ಯ ಸರ್ಕಾರ ತನ್ನ ಹಿಟ್ಲರ್ ಧೋರಣೆ ಮೂಲಕ ಪಂಚಮಸಾಲಿಗಳ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ತಮ್ಮ ಹಿಟ್ಲರ್ ಆಡಳಿತದಲ್ಲಿ ರಾಜ್ಯದ ಜನತೆ ಹಕ್ಕುಗಳಿಗಾಗಿ ಶಾಂತಿಯುತ ಪ್ರತಿಭಟನೆ ಮಾಡಲೂ ಅವಕಾಶವಿಲ್ಲವೇ? ಬಾಯಲ್ಲಿ ಬಸವಣ್ಣನ ವಚನ ಹೇಳಿ ಕೈಯಲ್ಲಿ ಲಾಠಿ ಪ್ರಹಾರ ಮಾಡುವ ತಮ್ಮದು ಯಾವ ಸೀಮೆ ಸಿದ್ಧಾಂತ ಸ್ವಾಮಿ? ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ಅಶೋಕ್ ಪ್ರಶ್ನಿಸಿದ್ದಾರೆ.
ಪ್ರತಿಭಟನಾಕಾರರಿಗೆ ರಕ್ತ ಬರುವಂತೆ ಪೊಲೀಸರು ಲಾಠಿಯಿಂದ ಹೊಡೆದಿದ್ದಾರಲ್ಲ, ಪೊಲೀಸರು ಯಾರ ಅಣತಿಯಂತೆ ಈ ದುಸ್ಸಾಹಸ ಮಾಡಿದ್ದಾರೆ? ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಜನರ ಹಕ್ಕು. ಜನರ ಸಮಸ್ಯೆ ಆಲಿಸಿ ಅವರಿಗೆ ಸಮಾಧಾನ ಹೇಳಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಸರ್ಕಾರದ ಕರ್ತವ್ಯ. ಈ ರೀತಿ ಮುತ್ಸದ್ಧಿತನ ತೋರುವುದು ಬಿಟ್ಟು, ಏಕಾಏಕಿ ಲಾಠಿ ಚಾರ್ಚ್ ಮಾಡುವ ಮೂಲಕ ಒಂದು ಸಮುದಾಯವನ್ನು ಪ್ರಚೋದನೆ ಮಾಡಿ ರೊಚ್ಚಿಗೇಳಿಸುವುದು ಯಾವ ಸೀಮೆ ಆಡಳಿತ? ಯಾವ ಸೀಮೆ ನಾಯಕತ್ವ? ಎಂದು ಅಶೋಕ್ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸರ್ಕಾರದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರನ್ನ ಕರೆಸಿ ಮಾತನಾಡಿ. ಅವರ ಮೀಸಲಾತಿ ಬೇಡಿಕೆ ಬಗ್ಗೆ ತಮ್ಮ ನೀಲಿವೇನು ಎನ್ನುವುದನ್ನ ಸ್ಪಷ್ಟ ಪಡಿಸಿ. ಪರಿಸ್ಥಿತಿ ಕೈಮೀರಿಹೋಗುವ ಮುನ್ನ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ ಎಂದು ಅವ್ರು ಸರ್ಕಾರವನ್ನು ಒತ್ತಾಯಿಸಿದ್ದಾರೆ.