ಮಂಗಳೂರು :ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟರ್ ಕೊಲೆ ಪ್ರಕರಣವನ್ನು ಯೋಜನಾಬದ್ಧವಾದ ಭಯೋತ್ಪಾದಕ ಕೃತ್ಯ ಎಂದು ಸರ್ಕಾರ ಪರಿಗಣಿಸಿದೆ ಎಂದು ಸಿಎಂ ಬಸವರಾಜ್ ಬೊಮ್ಮಯಿ ತಿಳಿಸಿದ್ದಾರೆ
ಸುಳ್ಯದಲ್ಲಿ ಮೃತ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಸಿಎಂ, ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರವೀಣ್ ಹತ್ಯೆಯು ಒಂದು ಪೂರ್ವಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ ಎಂದರು.
ಪ್ರವೀಣ್ ಹತ್ಯೆ ಪ್ರಕರಣ ಖಂಡನೀಯ. ಕಳೆದ ಹತ್ತು ವರ್ಷಗಳಲ್ಲಿ ಈ ಭಾಗದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿದೆ. ಸಮಾಜಘಾತುಕ ಶಕ್ತಿಗಳು ಬೆಂಬಲ ನೀಡಿರುವುದುರಿಂದ ನಿರ್ಭೆಡೆಯಿಂದ ಈ ಘಟನೆಯನ್ನು ನಡೆಸಲಾಗಿದೆ. ಇದನ್ನು ನಾವು ಕೊಲೆ ಪ್ರಕರಣವಾಗಿ ನೋಡುತ್ತಿಲ್ಲ. ದೇಶವನ್ನು ಛಿದ್ರ ಮಾಡುವ ಯೋಜನಾಬದ್ಧವಾದ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದೆ. ತನಿಖೆ ಪ್ರಾರಂಭವಾಗಿದೆ. ಆರೋಪಿಗಳು ರಾಜ್ಯದ ಗಡಿ ದಾಟಿರಬಹುದು. ಈ ಎಲ್ಲ ಆಯಾಮದಲ್ಲಿ ತನಿಖೆ ಮಾಡಲಾಗುತ್ತಿದೆ, ಕೆಲವರನ್ನು ವಶಕ್ಕೆ ತೆಗೆದುಕೊಂಡು, ಅವರಿಂದ ಪಡೆದ ಮಾಹಿತಿಯಿಂದ ತನಿಖೆ ಮುಂದುವರೆಯಲಿದೆ. ಅತಿ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂಬ ವಿಶ್ವಾಸವಿದೆ. ಎಡಿಜಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ ದುಷ್ಕøತ್ಯಗಳಲ್ಲಿ ತೊಡಗಿಕೊಂಡಿರುವ ಸಮಾಜಘಾತುಕ ಶಕ್ತಿಗಳ ಜಾಡು ಹಿಡಿದು, ಈ ದಿಸೆಯಲ್ಲಿಯೂ ತನಿಖೆ ಕೈಗೊಂಡು ಹಿಂದಿರುವ ಸಂಘಟನೆಗಳನ್ನು ಗಮನಿಸುತ್ತಿದ್ದೇವೆ ಎಂದರು.
ಕರ್ನಾಟಕ ರಾಜ್ಯಕ್ಕೆ ರಾಷ್ಟ್ರೀಯ ತನಿಖಾ ದಳವನ್ನು ಒದಗಿಸಲು ಕೋರಲಾಗಿದೆ. ವಿಶೇಷವಾಗಿ ಮಂಗಳೂರು ಭಾಗಕ್ಕೆ ಎನ್ ಐ ಎ ಯ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಪ್ರಾಥಮಿಕ ತನಿಖಾ ವರದಿಯ ಆಧಾರವಾಗಿ ಹೆಚ್ಚುವರಿ ತನಿಖೆಯ ಅವಶ್ಯಕತೆ ಇದ್ದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗುವುದು. ಈ ಘಟನೆಗೆ ಬೆಂಬಲ ನೀಡಿರುವ ಬಗ್ಗೆಯೂ ತನಿಖೆ ನಡೆಸಿ , ಈ ಕುಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲ ಜಾಲವನ್ನು ಭೇಧಿಸಲಾಗುವುದು. ಪಿಎಫ್‍ಐ ಬ್ಯಾನ್ ಮಾಡಲು ಕ್ರಮಗಳು ಪ್ರಾರಂಭವಾಗಿದೆ. ಈ ರೀತಿಯ ದುಷ್ಕøತ್ಯಗಳು ಭಾರತದ ವಿವಿಧ ರಾಜ್ಯಗಳಲ್ಲಿ ನಡೆದಿದ್ದು, ದೇಶದ ಮಟ್ಟದಲ್ಲಿ ಸರಿಯಾದ ಕ್ರಮವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಮಸೂದ್ ಹತ್ಯೆಗೂ ಹಾಗೂ ಪ್ರವೀಣ್ ಹತ್ಯೆಗೂ ಸಂಬಂಧವಿದೆಯೇ ಎಂಬ ಬಗ್ಗೆ ತನಿಖೆಯಿಂದ ತಿಳಿಯಲಿದೆ. ಪೊಲೀಸ್ ಅಧಿಕಾರಿಗಳ ಕರ್ತವ್ಯ ವೈಫಲ್ಯವಾಗಿದ್ದರೆ ಅದನ್ನೂ ತನಿಖೆಗೆ ಒಳಪಡಿಸಲಾಗುವುದು ಎಂದು ಸಿಎಂ ತಿಳಿಸಿದರು.




















































