ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ಪರಿಷತ್ ಫೈಟ್ ಇದೀಗ ರಾಜ್ಯದ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಅಖಾಡವೆನಿಸಿದೆ.
ವಿಧಾನಪರಿಷತ್ ಚುನಾವಣಾ ಅಖಾಡದಿಂದ 20 ಮಂದಿ ಹಿಂದಕ್ಕೆ ಸರಿಯುವ ಮೂಲಕ ಹಣಾಹಣಿಗೆ ರೋಚಕತೆ ತುಂಬಿದ್ದಾರೆ.
ನಾಮಪತ್ರ ವಾಪಸಾತಿಗೆ ಕೊನೆಯ ದಿನವಾದ ಶುಕ್ರವಾರ ಸಂಜೆಯವರೆಗೆ 20 ಮಂದಿ ಉಮೇದುವಾರಿಕೆಯನ್ನು ವಾಪಸ್ ಪಡೆದಿದ್ದಾರೆ. ಈ ಪೈಕಿ ಕೊಡಗಿನಲ್ಲಿ ಜೆಡಿಎಸ್ ಹುರಿಯಾಳು ಕಣದಿಂದ ಹಿಂದೆಸರಿದಿದ್ದು, ಅಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರ ಫೈಟ್ ಏರ್ಪಟ್ಟಿದೆ. 5 ಕಡೆ ತ್ರಿಕೋನ ಸ್ಪರ್ದೆ ಇದೆ.
ಮೇಲ್ಮನೆ ಅಖಾಡದಲ್ಲಿ 91 ಮಂದಿಯ ಅದೃಷ್ಠ ಪರೀಕ್ಷೆ
ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ 91 ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬರೋಬ್ಬರಿ 111ಮಂದಿ ನಾಮಪತ್ರ ಸಲ್ಲಿಸಿದ್ದು, ಈ ಪೈಕಿ 20 ಮಂದಿ ನಾಮಪತ್ರ ವಾಪಸ್ ಪಡೆದಿದ್ದಾರೆ.
ದಾರವಾಡ ಜಿಲ್ಲೆಯಲ್ಲಿ ಅತೀ ಹೆಚ್ಚು ಮಂದಿ ಕಣದಲ್ಲಿದ್ದಾರೆ. ಅಲ್ಲಿ 10 ಮಂದಿಯ ನಡುವೆ ಪೈಪೋಟಿ ಏರ್ಪಟ್ಟಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಕ್ಷಿಣಕನ್ನಡ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ.