ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಸಮಗ್ರ ಅಭಿವೃದ್ದಿಗಾಗಿ ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ ಅಧಿನಿಯಮ 2013 ನ್ನು ಜಾರಿಗೆ ತಂದು ಅನುಷ್ಠಾನಗೊಳಿಸಲಾಗುತ್ತಿದೆ. ಈ ಕಾಯ್ದೆಯನ್ವಯ ರಾಜ್ಯ ಅಭಿವೃದ್ದಿ ಪರಿಷತ್ ಸಭೆ ನಡೆಸಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ.
2021-22 ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ 18,331.54 ಕೋಟಿ ರೂ. ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ 7673.47 ಕೋಟಿ ರೂ.ಗಳು ಒಟ್ಟಾರೆಯಾಗಿ 26,005.01 ಕೋಟಿ ರೂ. ಅನುದಾನವನ್ನು 35 ಅಭಿವೃದ್ಧಿ ಇಲಾಖೆಗಳಿಗೆ ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಇಂದಿನ ರಾಜ್ಯ ಪರಿಷತ್ ಸಭೆಯಲ್ಲಿ ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆಗಳ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಗಿದೆ. ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ನಿಯಮಗಳು, 2017 ರ ಅನ್ವಯ ಮುಂದುವರೆದ ಕಾಮಗಾರಿಗಳಿಗೆ ಮೊದಲನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆ ಮಾಡಿ, ಅನುಷ್ಠಾನ ಮಾಡಲು ಎಲ್ಲಾ ಇಲಾಖೆಗಳಿಗೆ ತಿಳಿಸಿದರು.
ಸಮಾಜ ಕಲ್ಯಾಣ ಸಚಿವರ ಅಧ್ಯಕ್ಷತೆಯಲ್ಲಿ ನೋಡಲ್ ಏಜೆನ್ಸಿ ಸಭೆ ನಡೆಸಿ ವಿವಿಧ ಇಲಾಖೆಗಳು ಸಲ್ಲಿಸಿರುವ ಕ್ರಿಯಾ ಯೋಜನೆಯನ್ನು ಪರಿಶೀಲಿಸಿ ಅಗತ್ಯ ಮಾರ್ಪಾಡು ಹಾಗೂ ಶಿಫಾರಸ್ಸುಗಳೊಂದಿಗೆ ರಾಜ್ಯ ಪರಿಷತ್ ಅನುಮೋದನೆಗೆ ಕ್ರಿಯಾ ಯೋಜನೆ ಮಂಡಿಸಲಾಯಿತು.
ಈ ಕ್ರಿಯಾ ಯೋಜನೆಯನ್ನು ಎಲ್ಲಾ ಇಲಾಖೆಗಳಿಗೆ ಕಳುಹಿಸಿ, ಆಯಾ ಇಲಾಖೆಗಳು ಅಗತ್ಯವಿದ್ದಲ್ಲಿ ಸರ್ಕಾರಿ ಆದೇಶಗಳನ್ನು ಹೊರಡಿಸಿ, ನಿಗದಿತ ಅವಧಿಯೊಳಗೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ನಿರ್ದೇಶನ ನೀಡಿದರು.
ಪ್ರಸಕ್ತ ವರ್ಷದ ಪರಿಸ್ಥಿತಿಯನ್ನು ಗಮನಿಸಿ, ಆರ್ಥಿಕ, ಶಿಕ್ಷಣ, ಆರೋಗ್ಯ ಮತ್ತು ಇತರೆ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಸಂಬಂಧಿಸಿದ ಇಲಾಖೆಗಳು ಪ.ಜಾತಿ/ ಪ.ಪಂಗಡದ ಜನರಿಗೆ ಅನುಕೂಲವಾಗುವಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಿಳಿಸುತ್ತಾ, 100% ಗುರಿಯನ್ನು ಸಾಧಿಸಲು ಸ್ಪಷ್ಟ ನಿರ್ದೇಶನ ನೀಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಭೂಮಿ ಹಂಚಿಕೆ ಮತ್ತಿತರ ಯಾವುದೇ ಸೌಲಭ್ಯ ವಿತರಿಸುವಾಗ ಜಂಟಿ ಹೆಸರಿನಲ್ಲೇ ನೀಡುವಂತೆ ಸೂಚಿಸಲಾಯಿತು.
ಎಸ್.ಸಿ/ ಎಸ್‍ಟಿ ಫಲಾನುಭವಿಗಳಿಗೆ ಶೌಚಾಲಯ / ಸ್ನಾನ ಗೃಹ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯದ ಪಾಲು ಸೇರಿಸಿ ನೀಡುತ್ತಿರುವ ಸಹಾಯಧನವನ್ನು ತಲಾ ರೂ. 15,000 ಗಳಿಂದ 20,000 ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಯಿತು.
ಈ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಜನರ ಬದುಕಿನ ಮಟ್ಟ ಸುಧಾರಣೆಗೆ ಪೂರಕವಾಗುವಂತೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
























































