ಬೆಂಗಳೂರು: ಪಕ್ಷಕ್ಕೆ ನಿಷ್ಠರಾಗಿ ಪಕ್ಷವನ್ನು ಬೆಳೆಸಿದರೆ ಮಾತ್ರ ಪಕ್ಷ ನಿಮ್ಮನ್ನು ಬೆಳೆಸುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾರೆ..
ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ನಡೆದ ಬೆಂಗಳೂರು ಉತ್ತರ ವಿಭಾಗದ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, “ಎಲ್ಲರಿಗೂ ಗೊತ್ತಿರುವಂತೆ ಬಿಜೆಪಿಯ ಸಂರಚನೆ ಇತರೆ ಪಕ್ಷಗಳಿಗಿಂತ ವಿಭಿನ್ನ. ಇಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದರೆ ಮಾತ್ರ ಬೆಳೆಯಲು ಸಾಧ್ಯ. ಚುನಾವಣೆಗಳಲ್ಲಿ ಟಿಕೆಟ್ ಸಿಗಲು ಸಾಧ್ಯ ಹಾಗೂ ಪದವಿಗಳು ಸಿಗಲು ಸಾಧ್ಯ” ಎಂದರು.
ಪಕ್ಷದ ಬೆಳವಣಿಗೆಗೆ ಯಾವುದೇ ಕಾಣಿಕೆ ನೀಡದೇ ತಾವು ಮಾತ್ರ ಬೆಳೆಯಬೇಕು ಎಂದುಕೊಂಡರೆ ಅಂಥವರು ಬೆಳೆಯಲು ಸಾಧ್ಯವಿಲ್ಲ. ಈ ಅಂಶವನ್ನು ಪ್ರತಿಯೊಬ್ಬ ಕಾರ್ಯಕರ್ತ, ಮುಖಂಡ ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಪಕ್ಷವು ಬಾಹ್ಯವಾಗಿ ಬೃಹತ್ತಾಗಿ ಕಾಣಿಸಿಕೊಂಡರಷ್ಟೇ ಸಾಲದು. ಮನೆ ಮನೆಯಲ್ಲೂ ಬಿಜೆಪಿ ಇರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಡಿಸಿಎಂ ಕರೆ ನೀಡಿದರು,
ಕಾರ್ಯಕರ್ತರು ಯಾವಾಗಲೂ ಜನರ ಜತೆಯಲ್ಲಿಯೇ ಇರಬೇಕು. ಜನರ ಜತೆಯಲ್ಲೇ ಇದ್ದು ಕೆಲಸ ಮಾಡಬೇಕು ಎಂದ ಡಿಸಿಎಂ, ಸಂಘಟನೆಯನ್ನು ಬಲಿಷ್ಠಗೊಳಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ಸಂಸದ ಡಿ.ವಿ.ಸದಾನಂದಗೌಡ, ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಶಾಸಕ ಮುನಿರಾಜು, ಉತ್ತರ ವಿಭಾಗದ ಬಿಜೆಪಿ ಅಧ್ಯಕ್ಷ ನಾರಾಯಣ ಗೌಡ ಮುಂತಾದವರು ಇದ್ದರು.