ತುಮಕೂರು: “ನವೆಂಬರ್‌ನಲ್ಲಿ ಕ್ರಾಂತಿ ಅಥವಾ ಬದಲಾವಣೆ ಆಗಲಿದೆ ಎಂದು ಎಲ್ಲರೂ ಸುಳ್ಳು ಹೇಳುತ್ತಿದ್ದಾರೆ,” ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೂರ್ಣ ಐದು ವರ್ಷಗಳ ಕಾಲ ಮುಂದುವರಿಯಲಿದೆ. ಬದಲಾವಣೆಯ ಯಾವುದೇ ಸಂದರ್ಭ ಇಲ್ಲ,” ಎಂದು ಹೇಳಿದರು.
ಅವರು ಮುಂದುವರೆದು, “ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ — ಕಾರ್ಪೊರೇಷನ್, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸುವ ಉದ್ದೇಶ ಹೊಂದಿದೆ,” ಎಂದರು.
ಸರ್ಕಾರದ ಬದಲಾವಣೆಯ ಕುರಿತು ಹರಿದಾಡುತ್ತಿರುವ ವದಂತಿಗಳನ್ನು ತಳ್ಳಿ ಹಾಕಿದ ರಾಜಣ್ಣ, “ನವೆಂಬರ್‌ನಲ್ಲಿ ಯಾವುದೇ ಕ್ರಾಂತಿ ಅಥವಾ ಬದಲಾವಣೆ ಸಂಭವಿಸುವುದಿಲ್ಲ. ಇಂತಹ ಊಹಾಪೋಹಗಳಿಗೆ ಯಾವುದೇ ತಾರ್ಕಿಕ ಆಧಾರವಿಲ್ಲ,” ಎಂದು ಸ್ಪಷ್ಟವಾಗಿ ಹೇಳಿದರು.