ಕಲಬುರಗಿ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ಗದಗದ ದಿಂಗಾಲೇಶ್ವರ ಸ್ವಾಮೀಜಿಯವರು ಕಾಂಗ್ರೆಸ್ ಸೇರುವ ಬಗ್ಗೆ ವ್ಯಾಪಕ ಚರ್ಚೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್, ಆ ಕುರಿತು ಇನ್ನೂ ನಿರ್ಧಾರವಾಗಿಲ್ಲ ಎಂದಿದ್ದಾರೆ.
ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ದಿಂಗಾಲೇಶ್ವರ ಶ್ರೀಗಳು ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುವ ವಿಚಾರ ಇನ್ನೂ ಅಂತಿಮಗೊಂಡಿಲ್ಲ. ಸದ್ಯ ಆಂತಹಾ ವಿಚಾರ ಪಕ್ಷದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಸೇರ್ಪಡೆಗೆ ಸ್ವಾಮೀಜಿ ಒಲವು ತೋರಿದ್ದರು. ನಾನು ಕೂಡಾ ಈ ವಿಚಾರದಲ್ಲಿ ಉತ್ಸಾಹಿತನಾಗಿದ್ದೆ. ಆದರೆ ಪಕ್ಷದಲ್ಲಿ, ಸ್ಥಳೀಯವಾಗಿ ವಿರೋಧ ಉಂಟಾಗದಿರಲಿ ಎಂಬ ಕಾರಣಕ್ಕೆ ವಿಚಾರ ಕೈಬಿಡುವ ಬಗ್ಗೆ ಚಿಂತನೆ ನಡೆಸಿರುವುದಾಗಿ ತಿಳಿಸಿದರು.






















































