ದಾವಣಗೆರೆ ದಕ್ಷಿಣ ಉಪಚುನಾವಣಾ ಪ್ರಚಾರ ತೀವ್ರಗೊಂಡಿರುವ ಬೆನ್ನಲ್ಲೇ, ಕಾಂಗ್ರೆಸ್‌ಗೆ ಅಲ್ಪಸಂಖ್ಯಾತ ಸಮುದಾಯದ ಮತ ವಿಭಜನೆಯ ಭೀತಿ ಹೆಚ್ಚಾಗಿದೆ. ಸಾಧಿಕ್ ಪೈಲ್ವಾನ್ ನಂತರ ಮತ್ತೋರ್ವ ಮುಸ್ಲಿಂ ಪಕ್ಷೇತರ ಅಭ್ಯರ್ಥಿ ಖಾದರ್ ಆದಿಲ್ ಬಾಷಾ ಕಣಕ್ಕಿಳಿದಿರುವುದು ಕಾಂಗ್ರೆಸ್‌ಗೆ ಹೊಸ ತಲೆನೋವು.
ಸಿಎಂ ಇಬ್ರಾಹಿಂ ಪ್ರಚಾರಕ್ಕಿಳಿದ ಕೂಡಲೇ ಎಚ್ಚೆತ್ತುಕೊಂಡ ಕಾಂಗ್ರೆಸ್ ನಾಯಕರು, ಖಾದರ್ ಬಾಷಾ ಮನವೊಲಿಸಲು ಮಿಷನ್ ಆರಂಭಿಸಿದ್ದಾರೆ. ಈ ಹಿನ್ನೆಲೆ, ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಭದ್ರಾವತಿ ಶಾಸಕ ಸಂಗಮೇಶ್ ದಾವಣಗೆರೆಯ ದೇವರಾಜ ಅರಸು ಬಡಾವಣೆಯಲ್ಲಿರುವ ಆದಿಲ್ ಅವರ ಮನೆಗೆ ಭೇಟಿ ನೀಡಿ, ಸುಮಾರು ಒಂದು ಗಂಟೆ ಮಾತುಕತೆ ನಡೆಸಿದ್ದಾರೆ.
ಭೇಟಿಯ ನಂತರ ಮಾತನಾಡಿದ ಸಂಗಮೇಶ್, “ಖಾದರ್ ಆದಿಲ್ ಬಾಷಾ ನನ್ನ ಆತ್ಮೀಯರು. ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಮನವೊಲಿಸಲು ಬಂದಿದ್ದೇನೆ. ಖಾದರ್ ಬಾಷಾ ಪರ ಪ್ರಚಾರ ಮಾಡುತ್ತಿರುವ ಸಿಎಂ ಇಬ್ರಾಹಿಂ, ನನ್ನ ಎದುರು ನಿಂತು ಠೇವಣಿ ಕಳೆದುಕೊಂಡವರು. ಅಂತಹವರು ಬಂದರೆ ಗೆಲುವು ಸಾಧ್ಯವೇ? ಕೇವಲ ಭಾಷಣ ಮಾಡಿದರೆ ಮತ ಬರುವುದಿಲ್ಲ. ಕೋಮುವಾದಿ ಶಕ್ತಿಗಳಿಗೆ ಲಾಭವಾಗಬಾರದು ಎಂಬುದು ನಮ್ಮ ಮುಖ್ಯ ಉದ್ದೇಶ. ಇನ್ನೆರಡು ದಿನಗಳಲ್ಲಿ ನಿರ್ಧಾರ ತಿಳಿಸುವೆ ಎಂದು ಖಾದರ್ ಬಾಷಾ ಹೇಳಿದ್ದಾರೆ.
ಸಂಗಮೇಶ್ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಖಾದರ್ ಆದಿಲ್ ಬಾಷಾ,
“ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ನಾನು ಯಾವುದೇ ಪಕ್ಷದವನಲ್ಲ. ನನ್ನ ಪರ ಮಾಜಿ ಸಚಿವ ಸಿಎಂ ಇಬ್ರಾಹಿಂ ಪ್ರಚಾರ ಮಾಡುತ್ತಿದ್ದಾರೆ. ಸಂಗಮೇಶ್ ನನ್ನ ಆತ್ಮೀಯರು, ಭೇಟಿ ಸಂಕೇತಾತ್ಮಕ. ನಾನು ಕಣದಲ್ಲಿ ಕೊನೆಯವರೆಗೆ ಇರುತ್ತೇನೆ” ಎಂದು ಸ್ಪಷ್ಟಪಡಿಸಿದ್ದಾರೆ.
























































