ಏ.4: ಜೆಡಿಎಸ್ ಶಾಸಕ ಹೆಚ್. ಡಿ. ರೇವಣ್ಣ ಅವರಿಗೆ ದಾವಣಗೆರೆ ಬಿಜೆಪಿ ಯುವ ಮೋರ್ಚದಿಂದ ಶನಿವಾರ ಕ್ಯಾಂಡಲ್ ಗಳನ್ನು ಕಳುಹಿಸಿಕೊಡಲಾಯಿತು.
ಪ್ರಧಾನಿ ಮೋದಿ ಅವರು ಭಾನುವಾರ ಕ್ಯಾಂಡಲ್ ಬೆಳಗುವಂತೆ ಕರೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಾಸಕ ಹೆಚ್. ಡಿ. ರೇವಣ್ಣ ಲಾಕ್ ಡೌನ್ ಆಗಿದೆ ಎಲ್ಲಿಂದ ಕ್ಯಾಂಡೆಲ್ ಗಳನ್ನು ತಂದು ದೀಪ ಬೆಳಗಬೇಕು ಎಂದು ವ್ಯಂಗ್ಯವಾಡಿದ್ದರು.
ಆದ್ದರಿಂದ, ಬಿಜೆಪಿ ಕಾರ್ಯಕರ್ತರು ಅವರ ಮನೆಗೆ ಕ್ಯಾಂಡಲ್ ಗಳನ್ನು ಪೋಸ್ಟ್ ಮೂಲಕ ಪಾರ್ಸಲ್ ಕಳಿಸಿಕೊಟ್ಟರು.
ಇದೇ ವೇಳೆ ಮಾತನಾಡಿದ ದಕ್ಷಿಣ ಯುವ ಮೋರ್ಚ ಘಟಕದ ಅಧ್ಯಕ್ಷ ಮತ್ತು ಪಾಲಿಕೆ ಸದಸ್ಯ ಶಿವನಗೌಡ ಪಾಟೀಲ್, ಪ್ರಧಾನಿ ಅವರು ಕರೆ ನೀಡಿರುವ ದೀಪ ಪ್ರಜ್ವಲನ ಕಾರ್ಯಕ್ರಮ ಭಾರತದಂಥಹ ದೇವ ಭೂಮಿಗೆ ಇಂಥಹ ಸಂದಿಗ್ದ ಸಮಯದಲ್ಲಿ ಅಮೃತದ ಸಮಾನವಿದ್ದಂತೆ. ಭಾರತ ದೇವ ಭೂಮಿಯಾಗಿ, ತ್ಯಾಗ ಭೂಮಿಯಾಗಿ, ರಸ ಋಷಿ ದಾರ್ಶನಿಕರು, ಸಂತ ಮಹಾಂತರು ನಡೆದಾಡಿರುವ ಪಾವನ ಭೂಮಿಯಾಗಿ ವಿಶ್ವ ಭೂಪಟದಲ್ಲಿ ಇಗಾಗಲೇ ಗುರುತಿಸಿಕೊಂಡು ವಿಶ್ವ ಗುರುವಾಗಿ ಮೆರೆದಿದೆ. ಈ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಲು ತಮ್ಮಂಥಹ ದೈವ ಭಕ್ತರ ಸಹಕಾರವೂ ಅತ್ಯಾವಶ್ಯಕ ಎಂದು ರೇವಣ್ಣಗೆ ಕರೆ ನೀಡಿದರು.
ರೇವಣ್ಣ ಅವರ ಅಸಾಹಯಕತೆಯನ್ನು ಮನಗಂಡು ನಾವು ಹೊಳೆನರಸೀಪುರ ಮನೆಯ ವಿಳಾಸಕ್ಕೆ ಮೇಣದ ಬತ್ತಿ ಪ್ಯಾಕೆಟ್ ಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿಕೊಡುತ್ತಿದ್ದೇವೆ. ಆದ್ದರಿಂದ, ಅವರು ಕುಟುಂಬ ಪರಿವಾರ ಸಮೇತರಾಗಿ ನಿರ್ಮಲ ಮತ್ತು ನಿಶ್ಚಲ ಮನಸ್ಸಿನಿಂದ ದೇಶಕ್ಕೆ ಬಂದ ಕೊರೊನಾ ಕಂಟಕ ಹೊಡೆದೊಡಿಸಲು ಪ್ರಧಾನಿಯವರು ಕರೆ ನೀಡಿರುವ ಈ ದೀಪ ಪ್ರಜ್ವಲನ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಮನವಿ ಮಾಡಿದರು.
ಅದೇ ರೀತಿ ಜೆಡಿಎಸ್ ಪಕ್ಷದ ಯಾವುದಾದರೂ ಶಾಸಕರುಗಳು ಈ ಅಸಹಾಯಕತೆಯ ಅಳಲು ತಮ್ಮ ಮುಂದೆ ತೋಡಿಕೊಂಡಿದ್ದರೆ ನಮಗೆ ತಿಳಿಸಿ. ನಾವು ಅವರಿಗೂ ಕಳುಹಿಸಿ ಕೊಡಲು ಸಿದ್ಧರಿದ್ದೇವೆ ಎಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಮೊರ್ಚಾ ಆನಂದ್ ರಾವ್ ಸಿಂಧೆ, ಶ್ರೀಕಾಂತ್ ನಿಲಗುಂದ, ಟಿಂಕರ್ ಮಂಜಣ್ಣ, ಅಭಿಷೇಕ ಪಿ. ಮತ್ತಿತರರು ಉಪಸ್ಥಿತರಿದ್ದರು.