ಬೆಂಗಳೂರು: ಅಭಿಮಾನಿ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಬುಧವಾರ ಹೆಚ್ಚುವರಿ ಕಂಬಳಿಗಾಗಿ ಬೆಂಗಳೂರಿನ ವಿಚಾರಣಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಸುದ್ದಿಯ ಕೇಂದ್ರದರು. ಚಳಿಯಿಂದಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದರು.
CCH-57 ನ್ಯಾಯಾಲಯದಲ್ಲಿ ಹಾಜರಾದ ದರ್ಶನ್, “ಚಳಿಯಿಂದ ನಿದ್ರೆ ಆಗುತ್ತಿಲ್ಲ. ಜೈಲು ಅಧಿಕಾರಿಗಳು ಕಂಬಳಿ ಕೊಡುವುದಿಲ್ಲ, ಮನೆಯವರು ಕಳಿಸಿದ ಕಂಬಳಿಯನ್ನೂ ಅನುಮತಿಸಿಲ್ಲ” ಎಂದು ದೂರಿದರು.
ನ್ಯಾಯಾಧೀಶರು ಈ ಹೇಳಿಕೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿ, ನ್ಯಾಯಾಲಯದ ಪದೇಪದೇ ಸೂಚನೆಗಳ ಹೊರತಾಗಿಯೂ ಜೈಲು ಅಧಿಕಾರಿಗಳು ಕಂಬಳಿಯನ್ನು ನಿರಾಕರಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಶೀತ ವಾತಾವರಣದಲ್ಲಿರುವ ಕೈದಿಗೆ ಕಂಬಳಿ ನೀಡದಿರುವುದು ಹೇಗೆ ನ್ಯಾಯಸಮ್ಮತ ಎಂದು ಗರಂ ಆದ ನ್ಯಾಯಾಧೀಶರು, ತಕ್ಷಣವೇ ಕಂಬಳಿಯನ್ನು ಒದಗಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.
ಪ್ರಕರಣದ ಮತ್ತೊಬ್ಬ ಆರೋಪಿ ನಾಗರಾಜ್ ಕೂಡ “ಜೈಲಿನಲ್ಲಿ ಚಳಿ ಜಾಸ್ತಿ, ಆದರೆ ಕಂಬಳಿ ಕೊಡುತ್ತಿಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ದರ್ಶನ್ ಕೂಡ ಇದನ್ನು ಸಮರ್ಥಿಸಿ, ಚಳಿಯಿಂದಾಗಿ ನಿದ್ರೆ ಕಷ್ಟವಾಗುತ್ತಿದೆ ಎಂಬುದನ್ನು ಪುನರುಚ್ಚರಿಸಿದರು.
ಇದರ ನಡುವೆ, ನಿರ್ವಿವಾದಿತ ಸಾಕ್ಷ್ಯಗಳನ್ನು ಗುರುತಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರೊಸೀಜರ್ ಕೋಡ್ 264ರ ಅಡಿಯಲ್ಲಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿತು. ದರ್ಶನ್ ಪರ ವಕೀಲರ ಆಕ್ಷೇಪದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಡಿಸೆಂಬರ್ 3ಕ್ಕೆ ಮುಂದೂಡಲಾಯಿತು.
ಜೂನ್ 8, 2024ರಂದು ರೇಣುಕಸ್ವಾಮಿ ಕೊಲೆ ಪ್ರಕರಣ ಬೆಳಕಿಗೆ ಬಂದಿತ್ತು. ಚಿತ್ರದುರ್ಗದಿಂದ ಅಪಹರಿಸಿ, ಬೆಂಗಳೂರಿನಲ್ಲಿ ಶೆಡ್‌ಗೆ ತೆಗೆದುಕೊಂಡು ಹೋಗಿ ಹಿಂಸೆ ನೀಡಿ ಕೊಲೆ ಮಾಡಿದ ನಂತರ, ದೇಹವನ್ನು ಕಾಲುವೆಗೆ ಎಸೆದಿದ್ದರು ಎಂದು ಆರೋಪಿಸಲಾಗಿದೆ. ದರ್ಶನ್, ಅವರ ಸಂಗಾತಿ ಪವಿತ್ರಾ ಗೌಡ ಸೇರಿದಂತೆ 17 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಬಳಿಕ ‘ವೈಐಪಿ ಸೌಲಭ್ಯ’ ವಿವಾದದ ನಂತರ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು. ಸುಪ್ರೀಂ ಕೋರ್ಟ್ ದರ್ಶನ್ ಮತ್ತು ಪವಿತ್ರಾ ಗೌಡ ಅವರ ಜಾಮೀನು ರದ್ದುಪಡಿಸಿರುವುದರಿಂದ ಅವರು ನ್ಯಾಯಾಂಗ ಬಂಧನದಲ್ಲೇ ಇದ್ದಾರೆ.























































