ಬೆಳಗಾವಿ: ಘಟಪ್ರಭಾ ಎಡದಂಡೆ ಕಾಲುವೆ ಮತ್ತು ಬಲದಂಡೆ ಕಾಲುವೆಗಳಿಗೆ 2021-22ನೇ ಸಾಲಿನ ಹಿಡಕಲ್ ಜಲಾಶಾಯದಿಂದ ಹಿಂಗಾರು ಹಂಗಾಮಿನಲ್ಲಿ ರೈತರ ಕೃಷಿ ಜಮೀನುಗಳಿಗೆ ನೀರು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಪ್ರಸ್ತುತ ಜಲಾಶಯದಲ್ಲಿ 38.85 ಟಿ.ಎಂ.ಸಿ ನೀರು ನೀರಾವರಿಗೆ ಲಭ್ಯವಿದ್ದು, ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ 18-12-2021 ರಿಂದ 07-01-2022 ರವರೆಗೆ 20 ದಿನಗಳ ಕಾಲ ನೀರು ಹರಿಸಲಾಗುವುದು. ನಂತರ 22-01-2022 ರಿಂದ 11-02-2022 ರವರೆಗೆ ಮತ್ತು 26-02-2022 ರಿಂದ 18-03-2022 ರವರೆಗೆ ಒಟ್ಟು 60 ದಿನಗಳ ಕಾಲ ನೀರು ಹರಿಸಲಾಗುವುದು ಎಂದು ಸಚಿವರು ವಿವರಿಸಿದರು.
ಇದೇ ರೀತಿಯಾಗಿ ಚಿಕ್ಕೋಡಿ ಶಾಖಾ ಕಾಲುವೆಯಿಂದ 18-12-2021 ರಿಂದ 07-01-2022 ರವರೆಗೆ 20 ದಿನಗಳ ಕಾಲ ನೀರು ಹರಿಸಲಾಗುವುದು. 27-01-2022 ರಿಂದ 16-02-2022 ರವರೆಗೆ ಮತ್ತು 08-03-2022 ರಿಂದ 28-03-2022 ರವರೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ (ಐ.ಸಿ.ಸಿ) ನಿರ್ಣಯಿಸಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಬೆಳಗಾವಿ, ಹುಕ್ಕೇರಿ, ಸಂಕೇಶ್ವರ ನಗರಗಳಿಗೆ ಕುಡಿಯುವ ನೀರಿಗಾಗಿ 1.702 ಟಿ.ಎಂ.ಸಿ ನೀರನ್ನು ಮತ್ತು ಮುಧೋಳ, ಬಾಗಲಕೋಟೆ, ನಗರಗಳಿಗೆ 5.00 ಟಿ.ಎಂ.ಸಿ ನೀರನ್ನು ಕುಡಿಯುವ ನೀರಿಗಾಗಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸರ್ಕಾರಿ ಆದೇಶದಂತೆ ಬಿಡುಗಡೆ ಮಾಡಲು ಮೀಸಲಿರಿಸಲಾಗಿದೆ. ಅದರಂತೆ ಚಿಂಚಲಿ ಮಾಯಾಮಂದಿರ ಜಾತ್ರೆಗೆ ಹಾಗೂ ಕುಡಿಯುವ ನೀರಿಗಾಗಿ 1.00 ಟಿ.ಎಂ.ಸಿ ನೀರನ್ನು ಒದಗಿಸಲಾಗುವುದೆಂದು ಸಚಿವರು ತಿಳಿಸಿದರು.
ಘಟಪ್ರಭಾ ಯೋಜನೆಯ ನೀರಾವರಿ ಸಲಹಾ ಸಮಿತಿಯ ವರದಿಯನ್ನು ಸಭೆಯಲ್ಲಿ ಪರಿಶೀಲಿಸಲಾಯಿತು. 2021-22ನೇ ಸಾಲಿನ ಹಿಂಗಾರು ಮುಂಗಾಮು ಪ್ರಾರಂಭಗೊಂಡಿದ್ದು, ರೈತರ ಬೆಳೆಗಳಿಗಾಗಿ ಒಟ್ಟು ಕ್ಷೇತ್ರ 1,27,301 ಹೆಕ್ಟೇರ್ ಭೂಮಿಗೆ ನೀರು ಹರಿಸುವ ಪ್ರಕ್ರಿಯೆಯಿಂದ ಅನುಕೂಲವಾಗಲಿದೆ ಸಚಿವರು ಸಂತೋಷ ವ್ಯಕ್ತಪಡಿಸಿದರು.
ಬೆಳಗಾವಿ ಜಿಲ್ಲೆಯ ಗೋಕಾಕ್, ಹುಕ್ಕೇರಿ, ರಾಯಭಾಗ, ಮೂಡಲಗಿ, ಅಥಣಿ, ಚಿಕ್ಕೋಡಿ ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ, ಮುಧೋಳ, ಬೀಳಗಿ ತಾಲ್ಲೂಕುಗಳ ಅಚ್ಚುಕಟ್ಟು ಪ್ರದೇಶಕ್ಕೆ ಸೌಲಭ್ಯ ದೊರೆಯಲಿದೆ. ಹಿಂಗಾರು ಹಂಗಾಮಿನಲ್ಲಿ ರೈತರಿಗೆ ಈ ಸಾರಿ ವಿಫುಲವಾಗಿ ನೀರು ದೊರೆಯುವುದರಿಂದ ಈ ಭಾಗವೆಲ್ಲಾ ಹಸಿರಿನಿಂದ ನಳನಳಿಸುವಂತಾಗುತ್ತದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು. ರೈತರು ನೀರನ್ನು ಮಿತವಾಗಿ ಬಳಸಿ, ಕಾಲುವೆ ಕೊನೆಯ ಅಂಚಿನ ರೈತರಿಗೂ ನೀರು ದೊರಕುವಂತೆ ಸಹಕರಿಸಿ, ತಮ್ಮ ಭೂಮಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಮನವಿ ಮಾಡಿದರು.