ನವದೆಹಲಿ: 2025ರ ಗಣಪತಿ ಹಬ್ಬದ ಪ್ರಯುಕ್ತ ಭಕ್ತರ ಸುಗಮ ಸಂಚಾರಕ್ಕಾಗಿ ಭಾರತೀಯ ರೈಲ್ವೆ ಒಟ್ಟು 380 ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ. ಇದುವರೆಗೆ ನೀಡಿದ ಸೇವೆಗಳ ಪೈಕಿ ಇದು ಅತಿ ಹೆಚ್ಚಿನದು.
2023ರಲ್ಲಿ 305 ರೈಲುಗಳನ್ನು ಹಾಗೂ 2024ರಲ್ಲಿ 358 ರೈಲುಗಳನ್ನು ಸಂಚಾರಕ್ಕೆ ಬಿಡಲಾಗಿತ್ತು. ಈ ಬಾರಿ ಅದರಿಗಿಂತ ಹೆಚ್ಚುವರಿ ಸೇವೆಗಳನ್ನು ಒದಗಿಸಲಾಗಿದೆ.
ಯಾವ ವಲಯ ಎಷ್ಟು ರೈಲು?
- ಕೇಂದ್ರ ರೈಲ್ವೆ: 296 ರೈಲುಗಳು
- ಪಶ್ಚಿಮ ರೈಲ್ವೆ: 56 ರೈಲುಗಳು
- ಕೊಂಕಣ ರೈಲ್ವೆ (KRCL): 6 ರೈಲುಗಳು
- ನೈಋತ್ಯ ರೈಲ್ವೆ: 22 ರೈಲುಗಳು
ಮಹಾರಾಷ್ಟ್ರ ಹಾಗೂ ಕೊಂಕಣ ಪ್ರದೇಶದಲ್ಲಿ ಗಣೇಶೋತ್ಸವದ ಪ್ರಯಾಣಿಕರ ಹೆಚ್ಚಿದ ಬೇಡಿಕೆಗೆ ತಕ್ಕಂತೆ ಈ ವ್ಯವಸ್ಥೆ ಮಾಡಲಾಗಿದೆ.
ಕೊಂಕಣ ರೈಲ್ವೆ ನಿಲ್ದಾಣಗಳು
ಕೊಂಕಣ ಮಾರ್ಗದ ವಿಶೇಷ ರೈಲುಗಳು ಕೋಲಾಡ್, ಮಂಗಾಂವ್, ವೀರ್, ಖೇಡ್, ಚಿಪ್ಲುನ್, ರಾಜಪುರ, ಸಂಗಮೇಶ್ವರ್, ಕುಂಕಾವಲಿ, ಸಿಂಧುದುರ್ಗ, ಸಾವಂತವಾಡಿ ರಸ್ತೆ, ಕಾರವಾರ, ಗೋಕರ್ಣ ರಸ್ತೆ, ಕುಮಟಾ, ಉಡುಪಿ, ಮೂಲ್ಕಿ, ಸುರತ್ಕಲ್ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಮಾಡಲಿವೆ.
ಸೇವೆಯ ಅವಧಿ
ಗಣಪತಿ ಹಬ್ಬವನ್ನು ಆಗಸ್ಟ್ 27ರಿಂದ ಸೆಪ್ಟೆಂಬರ್ 6ರವರೆಗೆ ಆಚರಿಸಲಾಗುತ್ತಿದ್ದು, ಆಗಸ್ಟ್ 11ರಿಂದ ಹಂತಹಂತವಾಗಿ ವಿಶೇಷ ರೈಲುಗಳು ಸಂಚಾರ ಆರಂಭಿಸಲಿದೆ.
ವಿಶೇಷ ರೈಲುಗಳ ವೇಳಾಪಟ್ಟಿ IRCTC ವೆಬ್‌ಸೈಟ್, ರೈಲ್‌ಒನ್ ಆಪ್ ಮತ್ತು ಗಣಕೀಕೃತ PRS ಕೇಂದ್ರಗಳಲ್ಲಿ ಲಭ್ಯವಿದೆ. “ಭಕ್ತರಿಗೆ ಸುರಕ್ಷಿತ, ಸುಗಮ ಹಾಗೂ ಅನುಕೂಲಕರ ಪ್ರಯಾಣವನ್ನು ಖಾತ್ರಿಪಡಿಸುವುದು ನಮ್ಮ ಬದ್ಧತೆ” ಎಂದು ಭಾರತೀಯ ರೈಲ್ವೆ ತಿಳಿಸಿದೆ.