ಮೈಸೂರು: ಒಂದೊಮ್ಮೆ ಗುರು ಶಿಷ್ಯರಂತಿದ್ದ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಸ್ತುತ ಪರಿಸ್ತಿತಿಯಲ್ಲಿ ರಾಜಕೀಯ ಎದುರಾಳಿಗಳು. ಕೆಲಸಮಯದಿಂದ ತಣ್ಣಗಿದ್ದ ಇವರಿಬ್ಬರ ವಾಕ್ಸಮರ ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೆ ಆರಂಭವಾಗಿದೆ.
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆಗಬೇಕಿತ್ತು. ಅದನ್ನು ಕಾಂಗ್ರೆಸ್ ನಾಯಕರೇ ತಪ್ಪಿಸಿದ್ದರು ಎಂದು ದೇವೇಗೌಡರು ವಿಶ್ಲೇಷಣೆ ಮಾಡಿದ್ದರು. ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಈ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಖರ್ಗೆಯರಿಗೆ ಸಿಎಂ ಸ್ಥಾನ ತಪ್ಪಿಸಿದವರು ಯಾರು ಎಂಬುದನ್ನು ಬಹಿರಂಗಪಡಿಸುವಂತೆ ಗೌಡರಿಗೆ ಸವಾಲು ಹಾಕಿದ್ದಾರೆ.
ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ದೇವೇಗೌಡರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಖರ್ಗೆಯರಿಗೆ ಸಿಎಂ ಸ್ಥಾನ ತಪ್ಪಿಸಿರುವ ಆ ಪಕ್ಷದ ನಾಯಕರ ನಡೆ ಬಗ್ಗೆಯೂ ಅವರು ವಿಶ್ಲೇಷಣೆ ಮಾಡಿದ್ದರು.
ಈ ಬಗ್ಗೆ ಭಾನುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ದೇವೇಗೌಡರ ಹೇಳಿಕೆಗೆ ತಮ್ಮದೇ ದಾಟಿಯಲ್ಲಿ ಪ್ರತಿಕ್ರಿಯಿಸಿದರು. ಸಿಎಂ ಸ್ಥಾನಕ್ಕೆ ಖರ್ಗೆ ಹೆಸರು ತಿರಸ್ಕರಿಸಿದ್ದು ನಾನಂತೂ ಅಲ್ಲ, ಖರ್ಗೆ ಹೆಸರನ್ನು ಯಾರು ತಿರಸ್ಕಾರ ಮಾಡಿದರು ಅಂತ ದೇವೇಗೌಡರಿಗೆ ಗೊತ್ತಿದ್ದರೆ ಆ ಹೆಸರನ್ನು ಅವರೇ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.