ವಿಜಯಪುರ: ಎರಡು ವರ್ಷದ ಮಗುವೊಂದು ತೆರೆದ ಕೊಳವೆ ಬಾವಿಗೆ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ಬಳಿ ನಡೆದಿದೆ. ಕೊಳವೆ ಬಾವಿಗೆ ಬಿದ್ದಿರುವ ಮಗುವಿನ ರಕ್ಷಣೆ ನಡೆಯುತ್ತಿದೆ.
ಲಚ್ಯಾಣ ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಮಂಗಳವಾರ ಎರಡು ಕೊಳವೆ ಬಾವಿ ಕೊರೆಸಲಾಗಿತ್ತು. ಒಂದರಲ್ಲಿ ಮಾತ್ರ ನೀರು ಕಾಣಿಸಿಕೊಂಡಿತ್ತು ಎನ್ನಲಾಗಿದೆ.
ನೀರು ಕಾಣಿಸಿಕೊಂಡಿದ್ದ ಕೊಳವೆ ಭಾವಿಗೆ ಬುಧವಾರ ಸಂಜೆ ಮೋಟರ್ ಇಳಿಸುವ ಕೆಲಸ ನಡೆಯುತ್ತಿದ್ದಾಗ ಪಕ್ಕದಲ್ಲೇ ಆಟವಾಡುತ್ತಿದ್ದ ಮಗು ನೀರು ಸಿಗದ ಕೊಳವೆ ಬಾವಿಯೊಳಗೆ ಬಿದ್ದಿದೆ ಎನ್ನಲಾಗಿದೆ.
ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸೇವೆಯ ಸಿಬ್ಬಂದಿ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸಿಸಿ ಕೆಮೆರಾದ ಆಧಾರದಲ್ಲಿ ಮಗು ಕೊಳವೆ ಬಾವಿಯಲ್ಲಿ 16 ಅಡಿ ಆಳದಲ್ಲಿ ಸಿಲುಕಿಕೊಂಡಿದೆ ಎನ್ನಲಾಗುತ್ತಿದ್ದು, ಮಗುವಿಗೆ ಉಸಿರಾಟ ವ್ಯವಸ್ಥೆ ಕಲ್ಪಿಸಿ ರಕ್ಷಣಾ ಕಾರ್ಯ ನಡೆದಿದೆ. 2 ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳ ಮೂಲಕ ಸುರಂಗ ಕೊರೆದು ಮಗುವಿನ ರಕ್ಷಣೆಗೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.